ಶಿರಸಿ: ಗಣೇಶನಗರದ ಶ್ರೀ ಗಜಾನನೋತ್ಸವ ಮಂಡಳಿ ಭವನದಲ್ಲಿ Wood crafting and decorative services ತರಬೇತಿ ಕಾರ್ಯಕ್ರಮದ ಪ್ರಮಾಣ ಪತ್ರ ವಿತರಣೆಯನ್ನು ಜೂ.12, ಭಾನುವಾರದಂದು FVTRS ಸಂಸ್ಥೆ ಬೆಂಗಳೂರು ಇವರಿಂದ ನಡೆಸಲಾಯಿತು.
ಶಿರಸಿ ಸುತ್ತಮುತ್ತಲಿನ ಭಾಗದ 18 ರಿಂದ 35 ವರ್ಷದ ಒಳಗಿನ ಯುವಕ ಯುವತಿಯರಿಗಾಗಿ FVTRS ಸಂಸ್ಥೆಯಿಂದ ಉದ್ಯೋಗ ಆಧಾರಿತ 1 ತಿಂಗಳ Wood crafting and decorative services ತರಬೇತಿಯನ್ನು ಆಯೋಜಿಸಲಾಗಿತ್ತು.
ಸುರೇಶ್ ಶೆಟ್ಟಿ(ಶ್ರೀ ಗಜಾನನೋತ್ಸವ ಮಂಡಳಿ ಅಧ್ಯಕ್ಷರು), ವಿನಾಯಕ ಹೆಗಡೆ, ರಾಘು ಕೊಡಿಯಾ, ಅರುಣ್ ಶೆಟ್ಟಿ, ಮಹಾಬಲೇಶ್ವರ ಭಟ್, ಶ್ರೀಧರ್ ಹೆಗಡೆ(ತರಬೇತುದಾರರು), ಮದನ್ ಗೌಡರ್( ಕ್ಷೇತ್ರ ಉಸ್ತುವಾರಿ ಅಧಿಕಾರಿ ಎಫ್.ವಿ.ಟಿ.ಆರ್.ಎಸ್ ಸಂಸ್ಥೆ), ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರಬೇತುದಾರರಾದ ಶ್ರೀಧರ್ ಹೆಗಡೆಯವರು ಮಾತನಾಡಿ ತಾವು ಕಳೆದ 22 ವರ್ಷಗಳಿಂದ ತೆಂಗಿನಕಾಯಿ ಚಿಪ್ಪಿನ ಗರಟೆಯಿಂದ ವಿವಿಧ ವಿನ್ಯಾಸದ ಅಲಂಕಾರಿಕ ವಸ್ತುಗಳು ಮತ್ತು ಅಡಿಕೆ ಮರದ ಉಪ ಉತ್ಪನ್ನಗಳಿಂದ ನವೀನ ರೀತಿಯ ಟೇಬಲ್, ಪರ್ನಿಚರ್, ಸೀಲಿನ್ಗ್ಸ್, ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಲಂಕಾರಿಕ ಮಂಟಪಗಳನ್ನು ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕಲೆಗೆ ಹೆಚ್ಚಿನ ಬೇಡಿಕೆಯೂ ಇತ್ತು. ಆದರೆ ಇದನ್ನು ಬೆಳೆಸಿಕೊಂಡು ಹೋಗಲು ನನಗೆ ಒಂದು ತಂಡದ ಅವಶ್ಯಕತೆ ಇತ್ತು, ಎಫ್.ವಿ.ಟಿ.ಆರ್.ಎಸ್ ಸಂಸ್ಥೆಯಿಂದಾಗಿ 20 ಜನ ತರಬೇತಿದಾರರ ‘ಕಲಾ ಬಳಗ’ ಎಂಬ ತಂಡವನ್ನು ನಿರ್ಮಿಸಿಕೊಂಡಿದ್ದು, ನನ್ನ ವೃತ್ತಿ ಜೀವನಕ್ಕೆ ತುಂಬಾ ಸಹಾಯಕಾರಿಯಾಗಿದೆ ಎಂದು ತಿಳಿಸಿದರು. ಹಾಗೂ ಕಾರ್ಯಕ್ರಮದ ಕೊಠಡಿಯಲ್ಲಿ ತರಬೇತಿಯಲ್ಲಿ ಸಿದ್ಧವಾದ ಹಲವಾರು ಅಲಂಕಾರಿಕ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ಸುರೇಶ್ ಶೆಟ್ಟಿಯವರು ಮಾತನಾಡಿ ಶಿರಸಿ ಗ್ರಾಮೀಣ ಭಾಗದಲ್ಲಿ ಹೇರಳವಾಗಿ ಲಭ್ಯವಿರುವ ತೆಂಗಿನ ಚಿಪ್ಪು ಮತ್ತು ಅಡಿಕೆ ಮರಗಳನ್ನು ಉಪಯೋಗಿಸಿ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವ ಈ ಕಲೆಯನ್ನು ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸಿ ಮತ್ತು ಬೆಳೆಸಿಕೊಂಡು ಹೋಗುವುದು ಅವಶ್ಯಕವಾಗಿದೆ ಮತ್ತು ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಫ್. ವಿ. ಟಿ. ಆರ್. ಎಸ್ ಸಂಸ್ಥೆಯ ಕ್ಷೇತ್ರ ಉಸ್ತುವಾರಿ ಅಧಿಕಾರಿ ಮದನ್ ಗೌಡರ್ ಇವರು ಮಾತನಾಡಿ ಇಂದಿನ ದಿನಮಾನದಲ್ಲಿ ಅಸಂಘಟಿತ ವಲಯದ ಯುವಕ ಯುವತಿಯರಿಗೆ ಕೌಶಲ್ಯದ ಮಹತ್ವ, ಕೌಶಲ್ಯದ ಸದುಪಯೋಗ ಪಡಿಸಿಕೊಳ್ಳುವಿಕೆ ಹಾಗೂ ಅದರಿಂದ ಆದಾಯದಲ್ಲಾಗುವ ಬದಲಾವಣೆ ಹೀಗೆ ಅನೇಕ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಎಫ್.ವಿ.ಟಿ. ಆರ್.ಎಸ್ ಸಂಸ್ಥೆ ಕಳೆದ 29 ವರ್ಷಗಳಿಂದ ಹಿಂದುಳಿದ ವರ್ಗದ ಯುವಕ ಯುವತಿಯರಿಗೆ ಔದ್ಯೋಗಿಕ ತರಬೇತಿ, ಜೀವನ ಕೌಶಲ್ಯ ತರಬೇತಿ,ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ನೀಡಿ ಅವರನ್ನು ಉದ್ಯೋಗಸ್ತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.