ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್‌ನ ಬಾಡಿಗೆ ಅತಿಯಾಗಿದ್ದು, ನಿರ್ವಹಣೆಗೆ ಹೊರೆಯಾಗುತ್ತಿದೆ ಎಂದು ಮಾಲಿಕರಾದ ಮೇಘಾ ಅಳಲು ತೋಡಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರ ಊಟೋಪಾಹಾರಕ್ಕಾಗಿ ಬಸ್‌ಗಳನ್ನು ನಿಲ್ಲಿಸದಿರುವುದರಿಂದ ಕ್ಯಾಂಟಿನ್‌ನಲ್ಲಿ ಗ್ರಾಹಕರು ವ್ಯವಹರಿಸುವುದು ಕಡಿಮೆಯಾಗಿದೆ.ಗ್ರಾಹಕರು ಕಡಿಮೆಯಿದ್ದು, ಕಟ್ಟಡ ಬಾಡಿಗೆ ಹಾಗೂ ಠೇವಣಿ ಹೆಚ್ಚಾಗಿರುವುದರಿಂದ ಕ್ಯಾಂಟೀನ್ ನಿರ್ವಹಣೆ ಕಷ್ಟವಾಗಿದೆ. ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಹೆಚ್ಚಾಗಿ ದೂರದ ಊರುಗಳಿಗೆ ತೆರಳುವ ಬಸ್‌ಗಳು ತಂಗಿದಾಗ ಮಾತ್ರ ಪ್ರಯಾಣಿಕರು ವ್ಯವಹಾರ ಮಾಡುತ್ತಾರೆ. ಆದರೆ ಯಲ್ಲಾಪುರಕ್ಕೆ ಅಂತಹ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ಬಸ್‌ಗಳನ್ನು ಅಂಕೋಲಾ- ಯಲ್ಲಾಪುರ ಹೆದ್ದಾರಿ ಪಕ್ಕದ ಹೋಟೆಲ್‌ಗಳಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ. ಇದರಿಂದಾಗಿ ಸಹಜವಾಗಿಯೇ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.
ಆದರೆ ಕಟ್ಟಡ ಬಾಡಿಗೆಯಾಗಿ ಪ್ರತಿ ತಿಂಗಳು (ವಿದ್ಯುತ್, ಜಿಎಸ್‌ಟಿ ಸೇರಿ) 1.5 ಲಕ್ಷ ಭರಣ ಮಾಡುತ್ತಿದ್ದು, ಗಳಿಕೆಗಿಂತ ಹೆಚ್ಚಿನ ಹಣ ಬಾಡಿಗೆಯಲ್ಲಿ ಹೋಗುತ್ತಿದೆ ಎಂದರು. ಹೋಟೆಲ್ ಮಾಲಿಕರಾದ ಮೇಘಾ ಮಾತನಾಡಿ, ತಮ್ಮ ಯಜಮಾನರು 8 ಲಕ್ಷಕ್ಕೆ ಟೆಂಡರ್ ಪಡೆದಿದ್ದರು, ಅವರ ಆಕಸ್ಮಿಕ ಮರಣಾ ನಂತರ ಹೋಟೆಲ್ ನಿರ್ವಹಣೆ ತಾವೇ ಮಾಡುತ್ತಿದ್ದು ಶುಚಿರುಚಿಗೆ ಆದ್ಯತೆ ನೀಡುತ್ತಿದ್ದರೂ ಗ್ರಾಹಕರಿಗೆ ತಲುಪದಂತಾಗಿ ಆರ್ಥಿಕವಾಗಿ ನಷ್ಟ ಎದುರಿಸುವಂತಾಗಿದೆ. ಇನ್ನು ಬಸ್‌ಗಳನ್ನು ನಿಲ್ಲಿಸುವಂತೆ ಚಾಲಕರು ಹಾಗೂ ನಿರ್ವಾಹಕರನ್ನು ಕೋರಿದ್ದಲ್ಲಿ, ತಮಗೆ ಉಚಿತ ಊಟ ದೊರೆಯವಲ್ಲಿ ನಿಲ್ಲಿಸುತ್ತೇವೆ ಎಂಬ ಉತ್ತರವನ್ನು ನೀಡುತ್ತಾರೆ ಎಂದರು. ನಾವು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಹಾಗೂ ಚಾಲಕ-ನಿರ್ವಾಹಕರಿಗೆ ಅರ್ಧ ಬೆಲೆಯಲ್ಲಿ ನೀಡುತ್ತಿದ್ದರೂ, ಬಸ್‌ಗಳನ್ನು ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕ ಬಾಡಿಗೆಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. 15 ದಿನಗಳ ಹಿಂದೆ ತಪಾಸಣೆಗೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಹೆಚ್ಚಿನ ಬಸ್ ನಿಲುಗಡೆಯ ಕುರಿತು ಚರ್ಚಿಸುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.