ಶಿರಸಿ: ತಾಲೂಕು ಕೇಂದ್ರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ವಾನಳ್ಳಿ ಗ್ರಾಮ ಪಂಚಾಯಿತಿ, ಮುಸ್ಕಿ ಗ್ರಾಮದ ಹಗುರಮನೆ ಮತ್ತು ಮೇಲಿನ ಗದ್ದೆ ಈಗಲೂ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ಜನತೆ ಸೇತುವೆಯ ಸಂಪರ್ಕವಿಲ್ಲದೆ ವರ್ಷದಲ್ಲಿ ಎಂಟು ತಿಂಗಳು ಹೊರ ಪ್ರಪಂಚದ ಸಂಪರ್ಕವೇ ಇಲ್ಲದಂತೆ ಬದುಕುತ್ತಿದ್ದಾರೆ.
ಈ ಗ್ರಾಮದಲ್ಲಿ 31 ಕುಟುಂಬಗಳಿದ್ದು, 100ರಷ್ಟು ಜನಸಂಖ್ಯೆಯಿದೆ. ಗ್ರಾಮಕ್ಕೆ ಹಾದು ಹೋಗುವ ರಸ್ತೆಗೆ ಅಡ್ಡವಾಗಿ ಬಿಳಿಹೊಳೆಗೆ ಸೇತುವೆ ಇಲ್ಲದೇ ಸಂಪರ್ಕದ ಕೊರತೆಯಲ್ಲಿಯೇ ಇಂದಿನವರೆಗೂ ಗ್ರಾಮಸ್ಥರು ಜೀವಿಸುತ್ತಿದ್ದಾರೆ. ಅಂಧರು, ಅಂಗವಿಕಲರು ಮತ್ತು ವೃದ್ಧರು ಇರುವಂತಹ ಅತ್ಯಂತ ಹಿಂದುಳಿದ ಒಕ್ಕಲಿಗ ಸಮಾಜಕ್ಕೆ ಸೇರಿದ ರೈತಾಪಿ ಕುಟುಂಬದ ಜನವಸತಿ ಇರುವ ಈ ಗ್ರಾಮದಲ್ಲಿ ವಾಹನ ಸಂಪರ್ಕವಿಲ್ಲದೇ, ಮಳೆಗಾಲದ ಪೂರ್ವದಲ್ಲಿ ಮುಂದಿನ 8 ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ರಸಗೊಬ್ಬರ, ಆಹಾರ ಧಾನ್ಯ ಸಾಮಗ್ರಿಗಳನ್ನ ಶೇಖರಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.
ಈ ಗ್ರಾಮದಿಂದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ಸುಮಾರು 18 ಮಕ್ಕಳುಗಳಿಗೆ ರಸ್ತೆಯ ಸಂಪರ್ಕ, ಕಾಲುಸಂಕವಿಲ್ಲದೇ ಖಾಸಗಿ ಮತ್ತು ಇನ್ನಿತರ ಅತಿಕ್ರಮಣ ಕ್ಷೇತ್ರದಿಂದ ಅರಣ್ಯ ಮತ್ತು ಗಿಡ ಗಂಟಿಗಳ ಮಧ್ಯದಿಂದಲೇ ಓಡಾಡುವುದು ಅನಿವಾರ್ಯವಾಗಿದೆ. ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ತಾತ್ಸರ ಮನೋಭಾವನೆ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ. ಸರ್ವಋತು ರಸ್ತೆಯಿಲ್ಲದಿರುವುದರಿಂದ ಅನಾರೋಗ್ಯ ಪೀಡಿತರನ್ನ ಆರೋಗ್ಯ ಕೇಂದ್ರಕ್ಕೆ ಕಂಬಳಿಯಲ್ಲಿ ಸುತ್ತಿ ಸಾಗಿಸುವ ಸಾಹಸವನ್ನ ಗ್ರಾಮಸ್ಥರು ಆಗಾಗ ಮಾಡುವ ಪ್ರಸಂಗಗಳು ಜರುಗಿದೆ.
ಸಮಸ್ಯೆ ಕೇಳುವವರಿಲ್ಲ: ಹಿಂದೆ ಮಂಜೂರಿಯಾದ ಸೇತುವೆಯನ್ನ ಬೇರೆ ಸ್ಥಳಕ್ಕೆ ವರ್ಗಾಯಿಸಿರುವುದರಿಂದ ನಮ್ಮ ಗ್ರಾಮಕ್ಕೆ ಸೇತುವೆ ಇಲ್ಲದೇ, ವರ್ಷದಲ್ಲಿ 8 ತಿಂಗಳು ನಗರ ಪ್ರದೇಶದ ಸಂಪರ್ಕದಿಂದ ವಂಚಿತರಾಗುತ್ತೇವೆ. ಆಹಾರ ಮತ್ತು ಕೃಷಿ ಸಾಮಗ್ರಿ ಸಾಗಾಟಕ್ಕೆ ತೊಂದರೆ, ಶಾಲೆ ಮಕ್ಕಳು ಮತ್ತು ಹೆಂಗಸರಿಗೆ ಮಳೆಗಾಲದ ನಂತರ ಓಡಾಟಕ್ಕೆ ಸಾಧ್ಯವಾಗದೇ ಇರುವುದರಿಂದ ಸರಕಾರ ಅತೀ ಶೀಘ್ರದಲ್ಲಿ ಸೇತುವೆ ಮಂಜೂರಿ ಮಾಡಬೇಕೆಂದು ಗ್ರಾಮಸ್ಥರಾದ ನಾರಾಯಣ ಗೌಡ, ಗೌರಿ ಗೌಡ ಮತ್ತು ಸವಿತಾ ಗೌಡ ಸಾರ್ವತ್ರಿಕವಾಗಿ ಅಳಲನ್ನು ತೊಡಿಕೊಂಡಿದ್ದಾರೆ.
ಸೇತುವೆಯಿಲ್ಲದೇ ಗ್ರಾಮಸ್ಥರ ಪರದಾಟ : ಮಂಜೂರಿಯಾದ ಸೇತುವೆ ಕಾಮಗಾರಿ ಬೇರೆಡೆ ವರ್ಗಾವಣೆ
