ಮುಂಡಗೋಡ: ಪೊಲೀಸರೆಂದರೆ ಯಾರಿಗೆ ತಾನೇ ಭಯ ಇರಲ್ಲ ಹೇಳಿ. ಅದರಲ್ಲೂ ಚಿಕ್ಕ ಮಕ್ಕಳಿಗೆ ಪೊಲೀಸ್ ಬರ್ತಾರೆ ಎಂದು ಹೇಳಿ ಹೆದರಿಸುವ ಪೋಷಕರೇ ಹೆಚ್ಚು. ಆದರಿಲ್ಲಿ ನಿಜವಾಗಿಯೂ ಪೊಲೀಸ್ ಅಧಿಕಾರಿಯೊಬ್ಬರ ಧಮಕಿಯಿಂದ ಬಾಲಕಿಯೋರ್ವಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾಳೆ ಎನ್ನುವ ಆರೋಪ ಕೇಳಿಬಂದಿದ್ದು, ತಾಲೂಕಿನಲ್ಲಿ ಚರ್ಚೆಗೆ ಕಾರಣವಾಗಿದೆ.
ಪಟ್ಟಣದಲ್ಲಿ ಎಂಟನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕಿಗೆ ಇಲ್ಲಿನ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಧಮಕಿ ಹಾಕಿದ ಆರೋಪ ಕೇಳಿ ಬಂದಿದ್ದು, ಅಧಿಕಾರಿಯ ಧಮಕಿಯಿಂದ ಬಾಲಕಿ ಕಳೆದ ಒಂದು ವಾರದಿಂದ ಶಾಲೆಗೆ ಹೋಗದೇ ಮನೆಯಲ್ಲಿಯೇ ಹೆದರಿ ಕುಳಿತಿದ್ದಾಳೆ ಎನ್ನಲಾಗಿದೆ.
ಘಟನೆಯ ವಿವರ: ಗ್ರಾಮೀಣ ಭಾಗದ ಈ ಬಾಲಕಿಯ ತಂದೆ ಹೊಟ್ಟೆಪಾಡಿಗಾಗಿ ಗೋವಾದಲ್ಲಿ ದುಡಿಯುತ್ತಿದ್ದಾರೆ. ತಾಯಿ ತನ್ನ ಮೂವರು ಹೆಣ್ಣುಮಕ್ಕಳ ಜೊತೆ ಇಲ್ಲಿ ವಾಸ ಮಾಡುತ್ತಿದ್ದು, ಮೂವರು ಹೆಣ್ಣು ಮಕ್ಕಳ ಪೈಕಿ ಕೊನೆಯವಳು ಈ ಬಾಲಕಿ. ಜೂನ್ 5ರಂದು ಗ್ರಾಮದಲ್ಲಿ ಗದ್ದೆಗಳ ವ್ಯಾಜ್ಯದ ಸಲುವಾಗಿ ಪಿಎಸೈ ಸಿದ್ದಪ್ಪ ಸಿಮಾನಿ ಹಾಗೂ ಪೊಲೀಸರ ತಂಡ ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎರಡು ಕುಟುಂಬಗಳ ನಡುವೆ ಗದ್ದೆಯ ತಕರಾರು ತಾರಕಕ್ಕೇರಿದೆ. ಆ ವೇಳೆ ಬಾಲಕಿಯ ಮಾವನನ್ನ ಪೊಲೀಸರು ಎಳೆದಾಡಿ ಬೈಯ್ಯುತ್ತಿದ್ದರಂತೆ. ಹೀಗಾಗಿ ಬಾಲಕಿ ಅಲ್ಲೇನು ನಡೆಯುತ್ತಿದೆ ಎಂದು ಆ ಸ್ಥಳದ ಹತ್ತಿರ ತೆರಳಿ, ಆ ವೇಳೆ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದಳು ಎನ್ನಲಾಗಿದೆ. ಇದೊಂದೇ ಕಾರಣಕ್ಕೆ ಬಾಲಕಿಗೆ ಪೊಲೀಸ್ ಅಧಿಕಾರಿ ಹೆದರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪೊಲೀಸ್ ಅಧಿಕಾರಿ ಬಾಲಕಿಗೆ ‘ನೀನು ಬಾಳ ಶ್ಯಾಣೆಕಿ ಇದಿಯಾ, ನಮ್ದು ವಿಡಿಯೋ ಮಾಡ್ತಿಯಾ..? ಮುಂಡಗೋಡಿಗೆ ಬಾ ನಿನ್ನ ಚರ್ಮ ಸುಲಿತೀನಿ, ನಾಳೆ ನೀವೆಲ್ಲರೂ ಪೊಲೀಸ್ ಠಾಣೆಗೆ ರ‍್ರಿ’ ಎಂದು ಅವಾಜ್ ಹಾಕಿದ್ದಾರಂತೆ. ಅಲ್ಲದೇ ಆ ಬಾಲಕಿಯ ಕೈಯಲ್ಲಿ ಇದ್ದ ಮೊಬೈಲ್ ಕಸಿದುಕೊಂಡು ಹೋಗಿದ್ದಾರಂತೆ. ಪೊಲೀಸರು ಹೆದರಿಸಿ ಹೋದ ಕ್ಷಣದಿಂದ ಆ ಬಾಲಕಿ ಶಾಲೆಗೆ ತಾನು ಮುಂಡಗೋಡಿಗೆ ಹೋಗಬೇಕು. ಆಗ ಪೊಲೀಸರು ತನ್ನ ಚರ್ಮ ಸುಲಿಯುತ್ತಾರೆ ಎಂದು ಹೆದರಿ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾಳೆ ಎನ್ನುವ ಆರೋಪ ಮಾಡಲಾಗಿದೆ.
ಎಸ್ಪಿಗೆ ದೂರು: ಘಟನೆಯಿಂದ ಬಾಲಕಿ ಆತಂಕಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಬಾಲಕಿಯ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನ ಭೇಟಿ ಮಾಡಿ ದೂರು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಖುದ್ದು ಎಸ್‌ಪಿ ಡಾ.ಸುಮನ ಪೆನ್ನೇಕರ್ ಅವರ ಎದುರು ಅಳಲು ತೋಡಿಕೊಂಡು ತಮಗೆ ನ್ಯಾಯ ಕೊಡಿಸಿ ಅಂದಿದ್ದಾರೆ ಎನ್ನಲಾಗಿದೆ. ಇನ್ನು ಕಾರವಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೂ ಈ ಸಂಬಂಧ ದೂರು ನೀಡಿದ್ದು, ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎನ್ನುವುದು ಬಾಲಕಿಯ ಪೋಷಕರ ಆಗ್ರಹವಾಗಿದೆ.
ಬಾಲಕಿ ಮನೆಗೆ ಅಧಿಕಾರಿಗಳ ಭೇಟಿ: ಬಾಲಕಿ ಪೊಲೀಸರ ಬೆದರಿಕೆಯಿಂದ ಶಾಲೆಗೇ ಹೋಗದೆ ಮನೆಯಲ್ಲೇ ಕುಳಿತಿದ್ದಾಳೆ ಎನ್ನುವ ವಿಷಯ ತಿಳಿದು ಮುಂಡಗೋಡ ಬಿಇಓ ಸಿಬ್ಬಂದಿಗಳ ಜೊತೆಗೆ ಬಾಲಕಿಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೂ ಸಹ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಅಧಿಕಾರಿಗಳ ಮುಂದೆ ಬಾಲಕಿ ತನಗೆ ಪೊಲೀಸರು ಧಮಕಿ ಹಾಕಿದ ವಿಷಯವನ್ನ ತಿಳಿಸಿದ್ದು, ಅಧಿಕಾರಿಗಳು ಬಾಲಕಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದ್ದು, ಬಾಲಕಿ ಮಾತ್ರ ತಾನು ಶಾಲೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ ಎನ್ನಲಾಗಿದೆ.