ಅಂಕೋಲಾ: ವಿದ್ಯಾರ್ಥಿ ಹಂತದಲ್ಲಿಯೇ ಶಿಸ್ತು ಪ್ರಾಮಾಣಿಕತೆ ಒಳಗೊಂಡ ನಾಯಕತ್ವ ರೂಪುಗೊಳ್ಳಬೇಕು. ಉನ್ನತ ಸಾಧನೆಗೈಯಲು ಪ್ರೇರಕವಾದ ಅಚಲ ಧೃಢನಿರ್ಧಾರವನ್ನು ಕೈಗೊಂಡು ಶ್ರದ್ದೆಯಿಂದ ಮುನ್ನಡೆಯಬೇಕು ಎಂದು ಕಲ್ಪವೃಕ್ಷ ಸಂಸ್ಥೆಯ ನಿರ್ದೇಶಕ ಮಾರುತಿ ಎಲ್.ಹರಿಕಂತ್ರ ಹೇಳಿದರು.
ಪಟ್ಟಣದ ಪಿ.ಎಂ. ಪ್ರೌಢಶಾಲೆಯ 2022-23 ನೇಯ ಸಾಲಿನ ವಿದ್ಯಾರ್ಥಿ ಸಂಸತ್ ಉದ್ಘಾಟಿಸಿ ಅವರು ಮಾತನಾಡಿದರು. ಎಳೆಯ ವಯಸ್ಸಿನಲ್ಲಿ ಮಕ್ಕಳು ಸುತ್ತಲಿನ ಪರಿಸರ ಮತ್ತು ಶಿಕ್ಷರರನ್ನು ಅನುಕರಿಸಿ ಬೆಳೆಯುತ್ತಾರೆ. ಶಾಲೆಯ ವಾತಾವರಣ ಮತ್ತು ಶಿಕ್ಷಕರ ಮಾರ್ಗದರ್ಶನ ಅವರ ಭವಿಷ್ಯವನ್ನು ರೂಪಿಸುವಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತದೆ. ಪಿ ಎಂ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದಕ್ಕೆ ಉತ್ತಮ ನಿದರ್ಶನವಾಗಿದ್ದಾರೆ ಎಂದರು.
ಮನುಷ್ಯ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಲಾರ ಎಂದು ತಂದೆ ದೃಢವಾಗಿ ಹೇಳಿದ್ದರೂ, ರೈಟ್ ಸಹೋದರರು ವಿಮಾನ ಕಂಡು ಹಿಡಿಯುವ ಮೂಲಕ ಧೃಢ ನಿರ್ಧಾರದಿಂದ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ನಿರೂಪಿಸಿದರು.ಅಂತೆಯೇ ವಿದ್ಯಾರ್ಥಿಗಳು ಕಲೆ-ಸಾಹಿತ್ಯ ವಿಜ್ಞಾನ ತಂತ್ರಜ್ಞಾನ ವೈದ್ಯಕೀಯ ಶಿಕ್ಷಣ ಹೀಗೆ ಯಾವುದೇ ಕ್ಷೇತ್ರದಲ್ಲಿಯೂ ಅಸಾಧ್ಯ ಸಾಧನೆಗೆ ಇಂದೇ ಗುರಿ ನಿಗದಿಪಡಿಸಿ ಕೊಳ್ಳಬೇಕು. ಕನಸು ಸಾಕಾರಗೊಳ್ಳಲು ಅವಿರತವಾಗಿ ಶ್ರಮಿಸಬೇಕು. ಶ್ರದ್ಧೆಯಿಂದ ಕಾರ್ಯತತ್ಪರರಾಗಬೇಕು. ಆಗ ಯಶಸ್ಸು ನಿಮ್ಮದಾಗುತ್ತದೆ ಎಂದು ಕರೆ ನೀಡಿದರು. ವಿದ್ಯಾರ್ಥಿ ಹಂತದಲ್ಲಿಯೇ ದೇಶದ ಸಂಸತ್ತಿನ ಜವಾಬ್ದಾರಿ ಮತ್ತು ಕಾರ್ಯನಿರ್ವಹಣೆಗಳ ಅರಿವು ಮೂಡಿಸುವಲ್ಲಿ ಶಾಲಾ ಸಂಸತ್ ಅಗತ್ಯವಾಗಿದೆ. ಪ್ರಾಮಾಣಿಕ ರಾಜಕಾರಣಿಗಳ ಕೊರತೆಯನ್ನು ಮುಂದಿನ ವಿದ್ಯಾರ್ಥಿಗಳು ನೀಗಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರಿ ಮುಖ್ಯ ಶಿಕ್ಷಕಿ ಶೀಲಾ ಬಂಟ, ಶಾಲಾ ಸಂಸತ್ತಿನ ನಿಯಮಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಸಂಸತ್ ಪ್ರತಿನಿಧಿಗಳು ವಿದ್ಯಾರ್ಥಿಗಳ ಹಾಗೂ ಶಾಲೆಯ ಉನ್ನತಿಗೆ ಕೊಂಡಿಯಾಗಿದ್ದಾರೆ. ದೇಶದ ಆಗುಹೋಗುಗಳ ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಾತಾವರಣದ ಬಗ್ಗೆ ಅರಿವಿರಬೇಕು ಎಂದರು.
ಶಿಕ್ಷಕಿ ನಯನಾ ನಾಯಕ ಸ್ವಾಗತಿಸಿದರು. ಶಿಕ್ಷಕ ಪ್ರವೀಣ ಆಗೇರ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸತ್ ಕಾರ್ಯದರ್ಶಿ ಆಶ್ರಿತಾ ನಾಯಕ ವಂದಿಸಿದರು. ಎನ್.ಸಿ.ಸಿ. ಕಮಾಂಡರ್ ಶಿಕ್ಷಕ ಗಣಪತಿ ಜಿ. ಆರ್. ತಾಂಡೇಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಿ.ಎಸ್.ನಾಯ್ಕ, ಪಿಎಂ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಂಸತ್ ಕಾರ್ಯದರ್ಶಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.
ಉನ್ನತ ಸಾಧನೆಗೈಯಲು ಧೃಢ ನಿರ್ಧಾರ, ಶ್ರದ್ಧೆ ಅಗತ್ಯ: ಮಾರುತಿ
