ಸಿದ್ದಾಪುರ: ಪಟ್ಟಣದ ಶೃಂಗಾರ ಸ್ಟುಡಿಯೋ ಮಾಲಿಕರಾಗಿದ್ದ ಮನೋಹರ ಪದ್ಮಾಕರ ಕಾನಗೋಡ (62) ಶುಕ್ರವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಲ್ಲಿನ ಪಟ್ಟಣ ಪಂಚಾಯತ ಹಾಲಿ ಸದಸ್ಯೆ ರಾಧಿಕಾ ಕಾನಗೋಡ ಮೃತರ ಪತ್ನಿಯಾಗಿದ್ದು, ಮೂವರು ಗಂಡುಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ.ಭವಾನಿಬಾಯಿ ಕಾನಗೋಡ ಅವರ ಮೊಮ್ಮಗನಾಗಿದ್ದ ಮನೋಹರ ಕಾನಗೋಡ ಅವರು ಸ್ವಾತಂತ್ರ್ಯ ಯೋಧ ದಿ.ಪದ್ಮಾಕರ ಕಾನಗೋಡ ಅವರ ಮಗನಾಗಿದ್ದು ರಕ್ತಗತವಾಗಿ ಅಪಾರ ದೇಶಪ್ರೇಮ ಹೊಂದಿದ್ದರು. ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಮನೋಹರ ಅವರು ಉತ್ತಮ ಛಾಯಾಚಿತ್ರ ಗ್ರಾಹಕರಾಗಿ, ವಿಡಿಯೋಗ್ರಾಫರ್ ಆಗಿ ಹೆಸರು ಮಾಡಿದ್ದರು.
ಮೃತರ ಗೌರವಾರ್ಥ ಶನಿವಾರ ಪಟ್ಟಣದ ಎಲ್ಲಾ ಫೋಟೋ ಸ್ಟುಡಿಯೋಗಳನ್ನು ಬಂದ್ ಮಾಡಲಾಗಿತ್ತಲ್ಲದೇ ಸಿದ್ದಾಪುರ ಫೋಟೋಗ್ರಾರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಸಲಾಗಿದೆ ಎಂದು ಸಂಘದ ಅಧ್ಯಕ್ಷ ದಿನೇಶ ನಾಯ್ಕ ತಿಳಿಸಿದ್ದಾರೆ. ದೈವಜ್ಞ ಸಮಾಜ ಬಾಂಧವರು, ಸಾಯಿ ಸೇವಾ ಸಮೀತಿಯವರು, ವಾಜಪೇಯಿ ನಗರ ನಿವಾಸಿಗಳು ಮೃತರಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗಿ ಹಿರಿಯ ಛಾಯಾಚಿತ್ರಗ್ರಾಹಕ ಶಿರೀಷ ಬೆಟಗೇರಿ ತಿಳಿಸಿದ್ದಾರೆ. ಮನೋಹರ ಕಾನಗೋಡ ಅವರ ಅಕಾಲಿಕ ನಿಧನಕ್ಕೆ ತಾಲೂಕಿನಾದ್ಯಂತ ಅನೇಕ ಗಣ್ಯರು, ಮಿತ್ರರು ಕಂಬನಿ ಮಿಡಿದಿದ್ದಾರೆ.