ಶಿರಸಿ: ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 30 ವರ್ಷಗಳ ಕಾಲ ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ಮೇ 31ರಂದು ಸೇವಾನಿವೃತ್ತರಾದ ಎಸ್.ಎಂ.ಕಮನಳ್ಳಿಯವರನ್ನು ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಅಂತಿಮ ವರ್ಷದ ವಿದ್ಯಾರ್ಥಿಗಳು ಶಾಲು ಹೊದಿಸಿ, ಹೂವಿನ ಗಿಡವನ್ನು ಕೊಟ್ಟು, ನೆನಪಿನ ಕಾಣಿಕೆಯಾಗಿ ಫೋಟೋವನ್ನು ನೀಡಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ಸರಸ್ವತಿ ಮೂರ್ತಿಯನ್ನು ನೀಡಿ ಸನ್ಮಾನಿಸಿದರು.
ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಯಡಳ್ಳಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ವಿ.ಭಾಗವತ್ ಮಾತನಾಡಿ, ಭೂಗೋಳಶಾಸ್ತ್ರ ಒಂದು ನಿರ್ಜೀವ ಅಧ್ಯಯನ ಎಂದು ಹಲವರು ಹೇಳುತ್ತಾರೆ. ಆದರೆ ಅದಕ್ಕೆ ಜೀವವಿದೆ ಎಂದು ಅದನ್ನು ಅಧ್ಯಯನ ಮಾಡುವವರಿಗೆ ಮಾತ್ರ ತಿಳಿದಿರುತ್ತದೆ ಹಾಗೂ ಕಲಿಕೆಗೆ ಶಿಕ್ಷಣದ ಪಾತ್ರ ಅತೀ ಮುಖ್ಯವಾದದ್ದು. ಭೂಗೋಳಶಾಸ್ತ್ರದ ಉಪಯೋಗದ ಕವಲುಗಳು ಮುಖ್ಯಗಣನೆಯ ಸ್ಥಾನವನ್ನು ಹೊಂದಿದೆ ಎಂದರು.
ಸನ್ಮಾನಿತ ಪ್ರೊ.ಎಸ್.ಎಂ.ಕಮನಳ್ಳಿ ಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿ, ತಮ್ಮ ವೃತ್ತಿಜೀವನದ ಅನುಭವವನ್ನು ಹಂಚಿಕೊಂಡರು. ಸಹ ಪ್ರಾಧ್ಯಾಪಕಿ ಚಿನ್ಮಯಿ ಹೆಗಡೆ ಮಾತನಾಡಿ, ತಾವು ಕಲಿತ ಶಾಲೆಯಲ್ಲಿಯೇ ಕಲಿಸಲು ಬಂದದ್ದು ಹೊಸತನದ ಉತ್ಸಾಹ ತುಂಬಿದೆ ಎಂದು ಹೇಳಿದರು. ಭೂಗೋಳಶಾಸ್ತ್ರದ ವಿದ್ಯಾರ್ಥಿ ಅಣ್ಣಪ್ಪ, ಶಿಕ್ಷಕ ವೃತ್ತಿಗೆ ವಯಸ್ಸಿನ ಮಿತಿಯಿಲ್ಲ ಎಂಬಂತೆ ಕಮನಳ್ಳಿ ಅವರ ಕುರಿತು ಅನಿಸಿಕೆಯನ್ನು ಹೇಳಿದರು. ಇನ್ನೋರ್ವ ವಿದ್ಯಾರ್ಥಿ ಅಕ್ಷಯ್ ಗೌಡ, ಪ್ರೊ.ಕಮನಳ್ಳಿಯವರು ನಮಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡಿ, ಹಾಗೆಯೇ ನಮ್ಮ ಗುರಿಯನ್ನು ತಲುಪಲು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಸಮಾರಂಭದಲ್ಲಿ ಶಿಕ್ಷಕ- ಸಿಬ್ಬಂದಿ ವರ್ಗ ಹಾಗೂ ಭೂಗೋಳಶಾಸ್ತ್ರ ವಿಭಾಗದ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದಿವ್ಯಾ ಎಸ್.ಎಸ್. ನಿರೂಪಣೆ ಮಾಡಿದರು. ಅರ್ಚನಾ, ಭಾವನಾ ಪ್ರಾರ್ಥನೆಯನ್ನು ಹಾಡಿದರು. ಪಲ್ಲವಿ, ಸಂಗೀತಾ ಗೌಡ, ವಸಂತ್, ಮಂಜುನಾಥ, ಸಂದೇಶ್ ಸಭೆಯಲ್ಲಿರುವವರಿಗೆ ಹೂವನ್ನು ನೀಡಿ ಸ್ವಾಗತಿಸಿದರು. ಸಂಗೀತಾ ಎನ್.ಬಿ. ವಂದನಾರ್ಪಣೆ ಮಾಡಿದರು.
ಪ್ರೊ.ಎಸ್,ಎಂ.ಕಮನಳ್ಳಿಗೆ ಬೀಳ್ಕೊಡುಗೆ
