ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ಮತ್ತು ಶಾರದಾಗಲ್ಲಿಯ ಜನ ವಸತಿ ಪ್ರದೇಶದಲ್ಲಿರುವ ಬಿಲಾಲ್ ಮಸೀದಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಿರಸಿಯ ಸಹಾಯಕ ಆಯುಕ್ತರು, ತಹಸೀಲ್ದಾರರಿಗೆ ಸ್ಥಳೀಯರು ಮನವಿ ನೀಡಿ ಆಗ್ರಹಿಸಿದ್ದಾರೆ.
ಕಾಳಮ್ಮನಗರದ ಜನವಸತಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಬಿಲಾಲ್ ಮಸೀದಿ ಹಾಗೂ ಶಾದಿ ಮಹಲ್ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಸಾರ್ವಜನಿಕ ರಸ್ತೆ ಪ್ರದೇಶವನ್ನು ಅತಿಕ್ರಮಿಸಿ ಮಸೀದಿ ಕಟ್ಟಡವನ್ನು ನಿರ್ಮಿಸಲಾಗಿದೆ. ಶಾದಿ ಮಹಲ್ ಸುತ್ತ ಮುತ್ತಲೂ ಹಿಂದುಗಳ ವಸತಿ ಪ್ರದೇಶವಾಗಿದ್ದು, ಮಸೀದಿಯು ಹಿಂದೂ ಸಮಾಜ ಬಾಂಧವರ ವಸತಿ ಪ್ರದೇಶದ ಮಧ್ಯವರ್ತಿ ಪ್ರದೇಶವೂ ಆಗಿದೆ. ಮಸೀದಿಯ ಪ್ರಮುಖರು ಇಲ್ಲಿ ಅನಧಿಕೃತವಾಗಿ ಶಾದಿ ಮಹಲ್ ಕಟ್ಟಿದ್ದು, ಮಸೀದಿ ಹಾಗೂ ಶಾದಿ ಮಹಲ್‌ಗಳಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ಕಿರುಕುಳ ಉಂಟಾಗುತ್ತಿದೆ. ಇಲ್ಲಿ ಜರುಗುವ ಚುಟುವಟಿಕೆಗಳಿಂದಾಗಿ ಕೋಮು ಸಾಮರಸ್ಯ ಕದಡುವ ಹಂತಕ್ಕೆ ತಲುಪಿದೆ.
ಮಸೀದಿಯಲ್ಲಿ ನಮಾಜ್ ನಡೆಯುವ ವೇಳೆಯಲ್ಲಿ ದೊಡ್ಡದಾಗಿ ಧ್ವನಿ ವರ್ಧಕವನ್ನು ಬಳಸಲಾಗುತ್ತಿದೆ. ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಸ್ಥಳೀಯ ನಿವಾಸಿಗಳು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ನಮಾಜಿಗೆಂದು ಮಸೀದಿಗೆ ಬರುವ ಜನರು ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಗುತ್ತಿದ್ದು ಇದರಿಂದಾಗಿ ರಸ್ತೆಯ ಮೇಲೆ ಓಡಾಡುವ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಮಸೀದಿಯಲ್ಲಿನ ತ್ಯಾಜ್ಯ ವಸ್ತುಗಳನ್ನು ಅಕ್ಕಪಕ್ಕದ ನಿವಾಸಿಗಳ ಮನೆಗಳ ಮುಂದೆ ತಂದು ಚೆಲ್ಲಲಾಗುತ್ತಿದೆ. ಹೀಗೆ ಮಾಡದಂತೆ ಸ್ಥಳೀಯರು ತಿಳಿಸಿ ಹೇಳಿದರೆ ತಂಟೆ ತಕರಾರುಗಳಿಗೆ ಮುಂದಾಗುತ್ತಿದ್ದಾರೆ.
ಈ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ನಾವು ಈ ಹಿಂದಿನಿಂದಲೂ ಮನವಿ ಸಲ್ಲಿಸುತ್ತ ಬಂದಿದ್ದರೂ ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕೋಮು ಸಾಮರಸ್ಯ ಕಾಪಾಡುವುದಕ್ಕಾಗಿ, ಸ್ಥಳೀಯ ನಿವಾಸಿಗಳಿಗೆ ಉಂಟಾಗಿರುವ ತೊಂದರೆ ಮತ್ತು ಕಿರುಕುಳಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಸೂಕ್ತವಾದ ಶಿಸ್ತಿನ ಕ್ರಮ ಜರುಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಲ್ಲದೇ ಮಸೀದಿಯನ್ನು ಮುಸ್ಲಿಂ ಬಾಹುಳ್ಯವಿರುವ ಪ್ರದೇಶಕ್ಕೆ ಸ್ಥಳಾಂತರ ಮಾಡಿಸುವ ಕ್ರಮ ಜರುಗಿಸಬೇಕೆಂದು ಸ್ಥಳೀಯ ನಿವಾಸಿಗಳು ನಾರಾಯಣ ಗಣಪತಿ ಭಟ್ಟ ಅವರ ನೇತೃತ್ವದಲ್ಲಿ ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದಿಸಿರುವ ಪೊಲೀಸರು, ಬಿಲಾಲ್ ಮಸೀದಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಧ್ವನಿವರ್ಧಕದ ಬಳಕೆಯ ನಿಯಂತ್ರಣ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸಲು ಸೂಚಿಸಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ನಿಯಮಾವಳಿಗಳನ್ನು ಗಾಳಿಗೆ ತೂರಿದ ಬಿಲಾಲ್ ಮಸೀದಿ:ಸಮಸ್ಯೆ ಪರಿಹಾರಕ್ಕೆ ಸ್ಥಳೀಯರಿಂದ ಮನವಿ
