ಹೊನ್ನಾವರ: ಪಟ್ಟಣದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊನ್ನಾವರ ಇದರ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಖ್ಯಾತ ನ್ಯಾಯವಾದಿಗಳಾದ ಡಾ.ರವಿ ಹೆಗಡೆ ಹೂವಿನಮನೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಎಸ್.ಡಿ.ಎಂ. ಸಂಸ್ಥೆ ಸಾಧಕರ ಛಾವಡಿಯಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾಲೇಜು ಕೇವಲ ವಿದ್ಯಾಭ್ಯಾಸ ಪಡೆಯುವ ಕೇಂದ್ರವಾಗಿರದೇ, ವಿದ್ಯಾರ್ಥಿಗಳ ವ್ಯಕ್ತಿತ್ವ ಅನಾವರಣಗೊಳಿಸಿಕೊಳ್ಳುವ ಕೇಂದ್ರವಾಗಿದೆ. ಯಶಸ್ಸು ಮತ್ತು ಆತ್ಮವಿಶ್ವಾಸಕ್ಕೆ ಅವಿನಾಭಾವ ಸಂಭದವಿದೆ. ವಿದ್ಯಾರ್ಥಿಗಳಿಗೆ ಜೀವನ ರೂಪಿಸಲು ಕಾಲೇಜು ಬಹುಮುಖ್ಯವಾಗಿದೆ. ಇಂದು ನಮ್ಮ ಚಿಂತನೆ, ಮಾನಸಿಕತೆ, ಪ್ರವೃತ್ತಿ ಬದಲಾಗಿದೆಯೇ, ಹೊರತು ಕಾಲವಲ್ಲ. ನಾವೆಲ್ಲರೂ ಪ್ರಯತ್ನ ಮಾಡದೇ ಸೋಲುವುದು, ಜೀವನದ ಸೋಲಾಗಿದ್ದು, ವಿದ್ಯಾರ್ಥಿಗಳು ಪರಿಶ್ರಮಪಟ್ಟರೆ ಮುಂದಿನ ಜೀವನ ಸುಖಮಯವಾಗಿರಲಿದೆ. ಸೇವಾ ಮನೋಭಾವನೆಯ ಗುಣ ಅಳವಳಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠೈತರ ವಿಷಯದಲ್ಲಿ ಸಾಧನೆ ಮಾಡುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಕ್ರೀಡಾಪಟು ನಜೀಮ್ ಜಾವೇದ್ ಖಾನ್ ಮಾತನಾಡಿ ಕಾಲೇಜು ಹಲವು ರಂಗದಲ್ಲಿ ಸಾಧನೆ ಮಾಡಿದೆ. ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ ಉಪನ್ಯಾಸಕರ ಮಾಗದರ್ಶನದಿಂದ ಸಾಧ್ಯವಾಗಿದೆ. ಸಾಧನೆ ಮಾಡಲು ತಾಳ್ಮೆ, ಪರಿಶ್ರಮ, ಎಲ್ಲರನ್ನು ಗೌರವಿಸುವ ಗುಣದಿಂದ ಸಾಧ್ಯ. ಶಿಕ್ಷಣದ ಜೊತೆ ಕ್ರೀಡೆ ಸಾಂಸ್ಕೃತಿಕ ರಂಗದಲ್ಲಿಯೂ ಸಾಧನೆ ಮಾಡಲು ವಿಫಲ ಅವಕಾಶವಿದ್ದು, ದೊರೆತ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿ ನಮ್ಮಲ್ಲಿ ಎಲ್ಲಾ ಬಗೆಯ ಕೊರ್ಸ ಅಧ್ಯಯನಕ್ಕೆ ಅವಕಾಶವಿದ್ದು, ನಮ್ಮಲ್ಲಿರುವ ಅವಕಾಶಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ತಲುಪಿಸಲು ‘ಸಮೂಹದೆಡೆಗೆ ಶಿಕ್ಷಣ’ ಎನ್ನುವ ಶಿರ್ಷಿಕೆಯಡಿ ಕಾರ್ಯಕ್ರಮ ನಡೆಸಲು ಅಣಿಯಾಗಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಸಂಜೀವ ನಾಯಕ, ಕಲಾ ವಿಭಾಗದ ಸಲಹೆಗಾರ ನಾಗರಾಜ ಹೆಗಡೆ ಅಪಗಾಲ, ಕ್ರೀಡಾ ಸಲಹೆಗಾರರಾದ ಆರ್.ಕೆ.ಮೇಸ್ತ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯುನಿಯನ್ ಸಲಹೆಗಾರ ಸುರೇಶ ಎಸ್. ಸ್ವಾಗತಿಸಿ, ಉಪನ್ಯಾಸಕರಾದ ರೇಣುಕಾದೇವಿ ಗೋಳಿಕಟ್ಟೆ ಮತ್ತು ಪ್ರಶಾಂತ ಹೆಗಡೆ ಮೂಡಲಮನೆ ವಂದಿಸಿದರು. ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿದವು.