ಕಾರವಾರ: ಕೋಡಿಬಾಗದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಕಾರವಾರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ಯ ನಿಮಿತ್ತ ಹಮ್ಮಿಕೊಂಡ ಗಿಡ ನೆಡುವ ಕಾರ‍್ಯಕ್ರಮದಲ್ಲಿ ಉದ್ಘಾಟಕರಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರಕುಮಾರ ಆಗಮಿಸಿ ಗಿಡ ನೆಡುವ ಮೂಲಕ ಮಕ್ಕಳಿಗೆ ಸಂದೇಶವನ್ನು ನೀಡಿದರು.
ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಪರಿಸರವನ್ನು ಸಂರಕ್ಷಿಸಬೇಕು. ಇದರಿಂದ ಮುಂದಿನ ಪೀಳಿಗೆಯವರು ಸಹ ಶುದ್ಧವಾದ ಪರಿಸರದಲ್ಲಿ ಜೀವಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಸಂವಿಧಾನದ ಹಕ್ಕುಗಳು ಹಾಗೂ ಕರ್ತವ್ಯಗಳ ಜೊತೆಗೆ ಪರಿಸರವನ್ನು ಸಂರಕ್ಷಿಸುವುದು ಸಹ ನಮ್ಮ ಕರ್ತವ್ಯವಾಗಿದೆ. ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವಗಳನ್ನು ಆಚರಿಸುವುದರ ಉದ್ದೇಶವೂ ಸಹ ಇದೇ ಆಗಿದೆ ಎಂದು ಹೇಳಿದರು.
ಹಿಂದೆ ಜನರು ಶುದ್ಧವಾದ ಪರಿಸರದಲ್ಲಿ ವಾಸಿಸುವುದರ ಜೊತೆಗೆ ಪರಿಸರವನ್ನು ರಕ್ಷಿಸುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ನಾವು ಮುಂದುವರೆಯುತ್ತಿರುವುದರಿಂದ ಅಭಿವೃದ್ಧಿಗಾಗಿ ಪರಿಸರವನ್ನು ನಾಶಮಾಡುತ್ತಿದ್ದೇವೆ. ಪರಿಸರವನ್ನು ನಾವು ಕಾಪಾಡಿದರೆ ಅದು ನಮಗೆ ಜೀವನಪರ್ಯಂತ ಕಾಪಾಡುತ್ತದೆ ಎಂಬುದನ್ನು ನಾವು ಅರಿಯಬೇಕು. ಶುದ್ಧವಾದ ಪರಿಸರದಿಂದ ಶುದ್ಧವಾದ ಆಮ್ಲಜನಕ ಸಿಗುತ್ತದೆ. ಇದು ಎಲ್ಲಾ ಜೀವಿಗಳ ಉಳಿವಿಗೆ ಅತ್ಯಾವ್ಯಶ್ಯಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿವಿಜೇತ ನಜೀರ್ ಅಹಮದ್ ಯು. ಶೇಖ್, ಪ್ರಭಾರ ಮುಖ್ಯಾಧ್ಯಾಪಕ ರಾಮಕೃಷ್ಣ ಗಾಯತ್ರಿ ಹಾಗೂ ಹೆಚ್.ಡಿ.ಎಫ್.ಸಿ.ಬ್ಯಾಂಕ್‌ನ ವ್ಯವಸ್ಥಾಪಕ ಮಾರುತಿ ಸಾಂಬ್ರಾನಿ ಉಪಸ್ಥಿತರಿದ್ದು ಗಿಡಗಳನ್ನು ನೆಟ್ಟರು. ಪ್ರಾರಂಭದಲ್ಲಿ ಶಿಕ್ಷಕ ವಿಕ್ರಾಂತ ತಾಂಡೇಲ್ ಸ್ವಾಗತಿಸಿದರು. ಕೊನೆಯಲ್ಲಿ ಆಝಾದ್ ಯುಥ್ ಕ್ಲಬ್‌ನ ಅಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಾಯಾ ಕಿನ್ನರ್‌ಕರ್, ಶ್ರೀದೇವಿ ಮಹಾಲೆ, ಸಮೀದಾ ಕೊಲಂಬಕರ್, ಸಮೀನಾ ಶೇಖ್, ಸುಷ್ಮಿತಾ ನಾಯಕ, ರೆಹಾನಾ ಶೇಖ್, ಸುನಿಲ್ ಶೇಟ್, ಅನಿಲ್ ತಾಮಸೆ, ಮತ್ತು ಅಶಿಶ್ ನಾಗೇಕರ್ ಇದ್ದರು.