ಭಟ್ಕಳ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಸಾಗರದ ಜನ್ನತ್ ನಗರದ ನಿವಾಸಿ ಮಹಮ್ಮದ್ ನಯಾಜ್ ಎಂದು ಗುರುತಿಸಲಾಗಿದೆ. ಆರೋಪಿತನು ಖಾಸಗಿ ಬಸ್ ಚಾಲಕನಾಗಿದ್ದು, ಐದು ವರ್ಷಗಳ ಹಿಂದೆ ಓರ್ವನ ಸಾವಿಗೆ ಕಾರಣನಾಗಿದ್ದ. ನಂತರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದು, ನ್ಯಾಯಾಲಯ ಈತನ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.
ನಗರ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಗಿರೀಶ್ ಅಂಕೋಲೆಕರ್ ಹಾಗೂ ಜೈರಾಮ್ ಹೊಸ್ಕಟ್ಟಾ ಅವರು ಆರೋಪಿಯನ್ನು ತೀರ್ಥಹಳ್ಳಿಯ ಕೊಪ್ಪದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 1,500 ದಂಡ ವಿಧಿಸಿ ಜಾಮೀನು ನೀಡಿದೆ.