ಭಟ್ಕಳ: ಕೋವಿಡ್ ನಂತರ ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರು ಭೇಟಿ ನೀಡುವ ಸಂಖ್ಯೆ ಸುಧಾರಿಸಿಕೊಂಡಿದೆ. ಇದರ ನಡುವೆ ಮೋಜಾಟಕ್ಕೆ ಕಡಲ ತೀರಕ್ಕೆ ಇಳಿದು ಸಮುದ್ರಪಾಲಾಗುತ್ತಿರುವ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಪ್ರವಾಸಿಗರ ರಕ್ಷಣೆಗೆ ಕಡಲ ತೀರಗಳಲ್ಲಿ ಇನ್ನಷ್ಟು ಸುರಕ್ಷತಾ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.
ಭಟ್ಕಳ ತಾಲೂಕಿನ ಮುರ್ಡೇಶ್ವರದ ಕಡಲ ತೀರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ಸಮುದ್ರಪಾಲಾಗಿದ್ದಾರೆ. ಪ್ರವಾಸಕ್ಕೆ ಕುಟುಂಬದವರ ಜೊತೆ ಬಂದು ಕಡಲತೀರದಲ್ಲಿ ಇಳಿದು ಆಟವಾಡುವಾಗ ನೋಡನೋಡುತ್ತಲೇ ಬೃಹತ್ ಅಲೆಯಲ್ಲಿ ಕೊಚ್ಚಿ ಸಮುದ್ರ ಪಾಲಾಗಿದ್ದು, ನಾಪತ್ತೆಯಾದವರ ದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ.
ಇದು ಕೇವಲ ಮುರಡೇಶ್ವರದಲ್ಲಿ ಮಾತ್ರವಲ್ಲ. ಗೋಕರ್ಣದ ಕುಡ್ಲೆ, ಮುಖ್ಯ ಕಡಲ ತೀರ, ಓಂ ಬೀಚ್ ನಲ್ಲಿ ಈಜಲು ತೆರಳಿ ಮೃತಪಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆಯ ಉಳಿದ ಎಲ್ಲಾ ಕಡಲ ತೀರಗಳಿಗೆ ಹೋಲಿಸಿದರೆ ಮುರ್ಡೇಶ್ವರ ಹಾಗೂ ಗೋಕರ್ಣದ ಕಡಲ ತೀರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಲಿದ್ದು ಅಲ್ಲಿಯೇ ಹೆಚ್ಚು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಡುತ್ತಿದ್ದಾರೆ.
ಇನ್ನು ಪ್ರವಾಸಿಗರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಸುರಕ್ಷತೆಗೆ ಇನ್ನಷ್ಟು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹ. ಪ್ರವಾಸಿಗರ ಸುರಕ್ಷತೆ ನಿಟ್ಟಿನಲ್ಲಿ ಕಡಲ ತೀರದಲ್ಲಿ ಅಪಾಯವಿದೆ ಎನ್ನುವ ಬೋರ್ಡ್ಗಳನ್ನ ಹಾಕಲಾಗಿದೆ. ಇನ್ನು ಬೆರಳೆಣಿಕೆಯಷ್ಟು ಲೈಫ್ ಗಾರ್ಡ್ಗಳನ್ನ ಸಹ ನೇಮಕ ಮಾಡಲಾಗಿದೆ. ಆದರೆ ಅಪಾಯವಿರುವ ಸ್ಥಳದಲ್ಲಿ ಪ್ರವಾಸಿಗರಿಗೆ ಇಳಿಯದಂತೆ ಕಟ್ಟುನಿಟ್ಟಾಗಿ ಸೂಚನೆ ಕೊಡುವವರು ಯಾರಿಲ್ಲದಂತಾಗಿದೆ. ಇನ್ನು ಲೈಫ್ ಎರಡು ಕಡಲ ತೀರದಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿದ್ದು ಈ ಸ್ಥಳದಲ್ಲಿ ಲೈಫ್ ಗಾರ್ಡ್ ಗಳ ಸಂಖ್ಯೆ ಅಧಿಕ ಮಾಡುವ, ತಕ್ಷಣ ಮುಳುಗುತ್ತಿರುವ ಸ್ಥಳಕ್ಕೆ ಹೋಗಲು ಸ್ಪೀಡ್ ಬೋಟ್ ಗಳನ್ನ ಕೊಡುವ ಕಾರ್ಯಗಳಿಗೆ ಮಾತ್ರ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮುಂದಾಗಿಲ್ಲ.
ಈ ಹಿಂದೆ ಕಡಲತೀರದಲ್ಲಿ ಮುಳುಗುವ ಪ್ರವಾಸಿಗರ ಸಂಖ್ಯೆ ಅಧಿಕವಾದಾಗ ಲೈಫ್ ಗಾರ್ಡ್ಗಳ ನೇಮಕವನ್ನ ಮಾಡಲಾಗಿತ್ತು. ಆದರೆ ನಂತರ ಲೈಫ್ ಗಾರ್ಡ್ ಗಳ ನೇಮಕದಲ್ಲೂ ವಿಳಂಬ ದೋರಣೆ ತೋರಲಾಗಿತ್ತು. ಸದ್ಯ ಲೈಫ್ ಗಾರ್ಡ್ಗಳ ಸಂಖ್ಯೆ ಕಡಿಮೆ ಇದ್ದು, ಪ್ರವಾಸಿಗರ ಸುರಕ್ಷತೆ ನಿಟ್ಟಿನಲ್ಲಿ ಅಧಿಕ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಇನ್ನು ಅನಗತ್ಯ ಪ್ರದೇಶದಲ್ಲಿ ಸಿಬ್ಬಂದಿಗಳನ್ನ ಹಾಕುವ ಬದಲು ಹೆಚ್ಚು ಸಾವು ಸಂಭವಿಸುತ್ತಿರುವ ಪ್ರದೇಶಗಳಿಗೆ ಹೆಚ್ಚಿನ ಲೈಫ್ ಗಾರ್ಡ್ ಗಳ ನೇಮಕ ಮಾಡುವ ಕಾರ್ಯವನ್ನ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಮಾಡಬೇಕು ಎನ್ನುವುದು ಸ್ಥಳೀಯ ಆಗ್ರಹವಾಗಿದೆ.
ಸದ್ಯ ಮಳೆಗಾಲ ಪ್ರಾರಂಭವಾಗಿದ್ದು, ಅಲೆಗಳ ಅಬ್ಬರ ಸಹ ಹೆಚ್ಚಾಗಿದೆ. ಹೊರ ಪ್ರದೇಶದಿಂದ ಪ್ರವಾಸಕ್ಕೆ ಬರುವವರು ಅಲೆಗಳ ಅಬ್ಬರದ ಕಲ್ಪನೆ ಇಲ್ಲದೇ ಕಡಲ ತೀರಕ್ಕೆ ಇಳಿದು ಸಾವಿನ ದವಡೆಗೆ ಸಿಲುಕುವಂತೆ ಆಗಿದ್ದು ಈ ಬಗ್ಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗೆ ಗಂಭೀರವಾಗಿ ತೆಗೆದುಕೊಂಡು ಮಳೆಗಾಲ ಮುಗಿಯುವವರೆಗೆ, ಅಲೆಗಳ ಅಬ್ಬರ ಕಡಿಮೆಯಾಗುವ ವರೆಗೆ ಪ್ರವಾಸಿಗರ ಸುರಕ್ಷತೆಗೆ ಹದ್ದಿಣ ಕಣ್ಣಿಡಬೇಕು. ಇಲ್ಲದಿದ್ದರೆ ಸಾವು- ನೋವು ಇನ್ನಷ್ಟು ಹೆಚ್ಚಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.