ಕುಮಟಾ: ತಾಲೂಕಿನ ಬರ್ಗಿ ಗ್ರಾಮದಲ್ಲಿ ಹಾದು ಹೋಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ಅನೇಕರು ತಮ್ಮ ಜಮೀನುಗಳನ್ನ ಬಿಟ್ಟುಕೊಟ್ಟಿದ್ದಾರೆ.ಆದರೆ ಐಆರ್‌ಬಿ ಕಂಪನಿ ಸಾರ್ವಜನಿಕರಿಗೆ ನೀಡಬೇಕಾದ ಸೌಲಭ್ಯವನ್ನ ಸರಿಯಾಗಿ ಒದಗಿಸಿಲ್ಲ. ಹೆದ್ದಾರಿ ದೀಪಗಳಿಲ್ಲದೆ ರಾತ್ರಿ ಸಮಯದಲ್ಲಿ ಕಳ್ಳಖಾಕರಿಗೆ ಅನೂಕುಲ ಮಾಡಿಕೊಟ್ಟಿರುವಂತಾಗಿದೆ.
ಕಳೆದ ಒಂದೂವರೆ ಎರಡು ವರ್ಷದ ಹಿಂದೆ ಹೆದ್ದಾರಿಯಲ್ಲಿ ಐದರಿಂದ ಆರು ವಿದ್ಯುತ್ ಕಂಬಗಳನ್ನ ಹಾಕಲಾಗಿದ್ದು, ಅದರಲ್ಲಿ ಈಗಾಗಲೇ ನಾಲ್ಕೈದು ಕಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಹೆಚ್ಚಿನ ಕಂಬವನ್ನ ಅಳವಡಿಸುವುದಕ್ಕಾಗಿ ಹೆದ್ದಾರಿ ಪಕ್ಕದಲ್ಲಿ ಕಂಬಗಳನ್ನ ರಾಶಿ ಹಾಕಿಡಲಾಗಿದ್ದು, ತುಕ್ಕು ಹಿಡಿಯುವಂತಾಗಿದೆ. ಕೇವಲ ನಾಲ್ಕೈದು ಕಂಬವನ್ನ ನಿಲ್ಲಿಸಿ ಐಆರ್‌ಬಿ ಕಂಪನಿ ಸುಮ್ಮನಾಗಿದೆ. ಕಾರವಾರದ ಮಾಜಾಳಿಯಿಂದ ಭಟ್ಕಳದ ಶಿರೂರುವರೆಗೆ ಸಿಗುವ ಗ್ರಾಮೀಣ ಪ್ರದೇಶದಲ್ಲಿ 15ರಿಂದ 20 ವಿದ್ಯುತ್ ಕಂಬಗಳನ್ನ ಹಾಕಿ ಗ್ರಾಮದ ಹೆದ್ದಾರಿಯಲ್ಲಿ ಕತ್ತಲು ನಿವಾರಿಸಿದ್ದಾರೆ. ಆದರೆ ಬರ್ಗಿಯಲ್ಲಿ ಮಾತ್ರ ಕೆಟ್ಟು ಹೋಗಿರುವುದನ್ನು ಸಹ ದುರಸ್ತಿ ಮಾಡಲಾಗದೆ,ರಾಶಿ ಹಾಕಿರುವ ಕಂಬಗಳನ್ನ ಕೂಡ ಅಳವಡಿಸದೆ ಸುಮ್ಮನಿದ್ದಾರೆ. ಹೆದ್ದಾರಿಯಲ್ಲಿ ಕತ್ತಲು ಇರುವುದರಿಂದ ಕಳ್ಳಖಾಕರಿಗೆ ಇದರಿಂದ ಅವರ ಕೃತ್ಯ ನಡೆಸಲು ಸುಲಭವಾಗುವಂತಾಗಿದೆ.
ಇತ್ತೀಚೆಗೆ ಹೆದ್ದಾರಿ ಪಕ್ಕದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಒಂದರ ಸಿಸಿ ಟಿವಿ ಕ್ಯಾಮೆರಾ ಕಳ್ಳತನವಾಗಿದೆ. ಹೆದ್ದಾರಿಯಲ್ಲಿ ವಿದ್ಯುತ್ ಇಲ್ಲದೆ ಇರುವುದರಿಂದ ಹೆದ್ದಾರಿ ಅಕ್ಕ ಪಕ್ಕದಲ್ಲಿ ರಾತ್ರಿ ಸಮಯದಲ್ಲಿ ಮದ್ಯ ಕುಡಿಯುವವರಿಗೆ ಐಆರ್‌ಬಿ ಕಂಪನಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವಂತಾಗಿದೆ. ಹೆದ್ದಾರಿಯ ಎರಡು ಪಕ್ಕದಲ್ಲಿ ಹೈಸ್ಕೂಲ್, ಪ್ರಾಥಮಿಕ ಶಾಲೆ, ಬ್ಯಾಂಕ್ ಹಾಗೂ ಅನೇಕರ ಮನೆಗಳು ಇದೆ. ಹೆದ್ದಾರಿಯಲ್ಲಿ ಬೆಳಕು ಇಲ್ಲದೆ ಇರುವುದರಿಂದ ಕಳ್ಳಖಾಕರು ಇಂತಹ ಕಡೆ ಕಳ್ಳತನಕ್ಕೆ ಸಾಕಷ್ಟು ಬಾರಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಬರ್ಗಿಯಲ್ಲಿ ಊರಿನ ಹೆಸರು ಹಾಕಿರುವ ಒಂದೂ ಬೋರ್ಡ್ ಗಳನ್ನು ಹೆದ್ದಾರಿ ಪಕ್ಕದಲ್ಲಿ ಅಳವಡಿಸಿಲ್ಲ. ಉಳಿದ ಎಲ್ಲಾ ಕಡೆ ಆ ಊರಿನ ಹೆಸರು ಬರೆದಿರುವ ಬೋರ್ಡ್ ಹಾಕಲಾಗಿದೆ. ಐಆರ್‌ಬಿ ಕಂಪನಿ ಬರ್ಗಿ ಗ್ರಾಮದ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುತ್ತಿರುವಂತೆ ಕಾಣುತ್ತಿದೆ. ಈ ಬಗ್ಗೆ ಸಂಬಧಿಸಿರುವ ಅಧಿಕಾರಿಗಳು ಬರ್ಗಿ ಗ್ರಾಮದ ಚತುಷ್ಪಥ ಹೆದ್ದಾರಿಯಲ್ಲಿ ಕೆಟ್ಟುಹೋಗಿರುವ ವಿದ್ಯುತ್ ಕಂಬಗಳನ್ನ ದುರಸ್ತಿ ಮಾಡಿ ಹಾಗೂ ಇನ್ನೂ ಹೆಚ್ಚಿನ ವಿದ್ಯುತ್ ಕಂಬಳನ್ನು ಅಳವಡಿಸಿ ಹೆದ್ದಾರಿಯಲ್ಲಿ ಕತ್ತಲೆ ಮುಕ್ತವನ್ನಾಗಿ ಮಾಡುವುದರ ಜೊತೆಗೆ ಹೆದ್ದಾರಿ ಪಕ್ಕದಲ್ಲಿ ಬೋರ್ಡ್ ಗಳನ್ನುಅಳವಡಿಸಬೇಕಿದೆ. ಇಲ್ಲದೆ ಹೋದಲ್ಲಿ ಐಆರ್‌ಬಿ ಕಂಪನಿ ವಿರುದ್ಧ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.