ಕಾರವಾರ: ರೈಲಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ನಗದನ್ನು ಜಪ್ತಿಪಡಿಸಿಕೊಂಡಿರುವ ರೈಲ್ವೆ ರಕ್ಷಣಾ ದಳ, ಓರ್ವ ಯುವಕನನ್ನು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಠಾಣೆಗೆ ಪ್ರಕರಣ ಹಸ್ತಾಂತರಿಸಿದೆ.
ರೈಲು ಸಂಖ್ಯೆ: 12133 ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ಯುವಕನೊಬ್ಬ ಬ್ಯಾಗ್‌ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದ. ಈ ಬಗ್ಗೆ ರೈಲ್ವೆ ಟಿಕೆಟ್ ಪರೀಕ್ಷಕರು ವಿಚಾರಿಸಿದರೂ ಸರಿಯಾಗಿ ಉತ್ತರಿಸದಿದ್ದಾಗ ಆರ್.ಪಿಎಫ್‌ಗೆ ಮಾಹಿತಿ ನೀಡಿದ್ದರು. ಆರ್.ಪಿಎಫ್ ಸಿಬ್ಬಂದಿ ರೈಲು ಕಾರವಾರ ನಿಲ್ದಾಣಕ್ಕೆ ಬಂದಾಗ ಅನುಮಾನಿತನ ಬ್ಯಾಗ್ ತಪಾಸಣೆ ನಡೆಸಿದ್ದು, ಈ ವೇಳೆ ಬ್ಯಾಗ್ ನಲ್ಲಿ ರೂ.2 ಕೋಟಿ ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ.
ಬಂಧಿತ ವ್ಯಕ್ತಿಯನ್ನು ರಾಜಸ್ಥಾನದ ಜಲೋರ್‌ನ 22 ವರ್ಷದ ಚೇನ್ ಸಿಂಗ್ ಎಂದು ಗುರುತಿಸಲಾಗಿದೆ. ಈತನನ್ನು ವಿಚಾರಣೆ ನಡೆಸಿದಾಗ ಮುಂಬೈನ ಭರತ್ ಭಾಯ್ ಅಲಿಯಾಸ್ ಪಿಂಟು ಎಂಬಾತನ ಬಳಿ ರೂ.15000 ಮಾಸಿಕ ವೇತನದಲ್ಲಿ ಕೆಲಸ ಮಾಡುತ್ತಿದ್ದು, ಹಣವನ್ನು ಮಂಗಳೂರಿನಲ್ಲಿರುವ ರಾಜು ಎನ್ನುವವರಿಗೆ ತಲುಪಿಸಲು ಒಯ್ಯುತ್ತಿರುವುದಾಗಿ ತಿಳಿಸಿದ್ದಾನೆ.
ಜಪ್ತಿಪಡಿಸಿಕೊಂಡ ರೂ.2 ಕೋಟಿ ನಗದನ್ನು ಬ್ಯಾಗ್ ಸಹಿತ ಮುಂದಿನ ಕಾನೂನು ಮತ್ತು ಅಗತ್ಯ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಕಾರವಾರ ಗ್ರಾಮೀಣ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ.