ಅಂಕೋಲಾ: ಇಲ್ಲಿಯ ಉಪನೋಂದಣಾಧಿಕಾರಿಗಳ ಕಚೇರಿಗೆ ಉಪವಿಭಾಗಾಧಿಕಾರಿ ರಾಹುಲ್ ಪಾಂಡೇ ಗುರುವಾರ ದಿಢೀರ್ ಭೇಟಿ ನೀಡಿ ಕಚೇರಿ ವ್ಯವಸ್ಥೆ, ಕುಂದುಕೊರತೆ ಮತ್ತು ಕಟ್ಟಡದ ಕುರಿತು ನೋಂದಣಾಧಿಕಾರಿ ಎಂ.ಬಿ.ಬಾನಿಮಠ ಅವರಿಂದ ಮಾಹಿತಿ ಪಡೆದರು.
ಇದಕ್ಕೂ ಮೊದಲು ಇಲ್ಲಿಯ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರವಾಸಿ ಮಂದಿರದ ಕಟ್ಟಡದ ಕೊಠಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಪುರಸಭಾ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ವಕೀಲರು ಈ ಕಚೇರಿಯನ್ನು ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದ ಗ್ರಂಥಾಲಯ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಉಪವಿಭಾಗಾಧಿಕಾರಿ ಬಳಿ ಮನವಿ ನೀಡಿದ ಹಿನ್ನಲೆಯಲ್ಲಿ ರಾಹುಲ್ ಪಾಂಡೇ ತಕ್ಷಣವೇ ಹಳೆ ಉಪನೊಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿದರು.
ಮನವಿ ನೀಡುವ ವೇಳೆ ವಕೀಲ ಉಮೇಶ ಎನ್.ನಾಯ್ಕ ಮಾತನಾಡಿ, ಐಬಿಯ ಹಳೇ ಕಟ್ಟಡವನ್ನು ಹೊಸದಾಗಿ ಕಟ್ಟಿಸಲು ಈಗಾಗಲೇ ಕಾಮಗಾರಿಯ ಭೂಮಿಪೂಜೆ ಕೂಡ ನಡೆದಿದೆ. ಈ ಹಿನ್ನಲೆಯಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರಿಸುವುದು ಅನಿವಾರ್ಯವಾಗಿದೆ. ಈ ಕಚೇರಿಯನ್ನು ಸಮೀಪದ ಸತ್ಯಾಗ್ರಹ ಸ್ಮಾರಕ ಭವನದ ಗ್ರಂಥಾಲಯ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇದರಿಂದ ವೃದ್ಧರಿಗೆ ಹಾಗೂ ವಿಕಲ ಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದರು.
ತಹಶೀಲ್ದಾರ ಉದಯ ಕುಂಬಾರ ಕಟ್ಟಡದ ಕುರಿತು ಮತ್ತು ಉಪನೊಂದಣಾಧಿಕಾರಿ ಕಚೇರಿ ಕುರಿತು ರಾಹುಲ ಪಾಂಡೆಯವರಿಗೆ ಮಾಹಿತಿಯನ್ನ ನೀಡಿದರು. ವಕೀಲರಾದ ನಾಗಾನಂದ ಬಂಟ, ವಿನೋದ ಶಾನಭಾಗ, ಗಜಾನನ ನಾಯ್ಕ ಇದ್ದರು.