ಹೊನ್ನಾವರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಹುಟ್ಟೂರಿಗೆ ಮರಳಿದ ಯೋಧರಾದ ತಿಮ್ಮಪ್ಪ ನಾಯ್ಕ, ವಿನಾಯಕ ಮಾದೇವ ನಾಯ್ಕ ಅವರಿಗೆ ಸ್ವಾಗತ ಮೆರವಣಿಗೆ ಮತ್ತು ಸನ್ಮಾನ ಕಾರ್ಯಕ್ರಮ ತಾಲೂಕಿನ ಗೇರುಸೊಪ್ಪಾ ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದ ಆವಾರದಲ್ಲಿ ನಡೆಯಿತು.
ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ದೇಶ ಸೇವೆ ಸಲ್ಲಿಸಿ ನಿವೃತ್ತರಾದರವರಿಗೆ ಗೌರವಿಸುವುದು ನಮ್ಮ ಕರ್ತವ್ಯ. ಸೈನಿಕರು ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ಕಾರಣ ನಾವಿಂದು ಸುರಕ್ಷಿತವಾಗಿದ್ದೇವೆ. ಇತಿಹಾಸ ಗಮನಿಸಿದರೆ ನಮ್ಮ ದೇಶದ ರಕ್ಷಣಾ ವೈಪಲ್ಯದಿಂದ ತಲೆತಗ್ಗಿಸುವಂತಾಗಿಲ್ಲ. ಇದು ಹೆಮ್ಮೆಯ ವಿಚಾರ. ರಾಷ್ಟ್ರದ ವಿಷಯ ಬಂದಾಗ ಜಾತಿ,ಧರ್ಮ,ಪಕ್ಷ ಎಂದು ಭಿನ್ನವಾಗದೆ ನಾವೆಲ್ಲ ಒಂದಾಗಬೇಕು ಎಂದರು. ಸೈನಿಕರಾಗಲು ಎದೆಗಾರಿಕೆ ಬೇಕು. ಇಂತಹ ಯೋಧರು ಇನ್ನಷ್ಟು ಜನರಿಗೆ ಪ್ರೇರಣೆಯಾಗುವಂತಾಗಲಿ ಎಂದು ನಿವೃತ್ತ ಸೈನಿಕರಿಗೆ ಅಭಿನಂದಿಸಿದರು.
ಗ್ರಾಮಸ್ಥರು, ಕನ್ನಡ ಜ್ಯೋತಿ ಯುವಕ ಸಂಘದವರು ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ವಿನಾಯಕ ನಾಯ್ಕ ಮಾತನಾಡಿ, ಈ ಸನ್ಮಾನ ನನ್ನ ತಂದೆ-ತಾಯಿಗೆ ಸಲ್ಲುತ್ತದೆ ಎಂದು ವೃತ್ತಿಗೆ ಸೇರಲು ಸಹಕರಿಸಿದವರ ಸ್ಮರಿಸಿದರು.ಕಳೆದು ಹೋದ ಸಮಯ, ಬಂದೂಕಿನಿಂದ ಹೊರಟ ಗುಂಡು ಮರಳಿ ಬರುವುದಿಲ್ಲ ಎಂದು ಜೀವನದ ಮೌಲ್ಯಗಳ ಕುರಿತು ವಿವರಿಸಿದರು.
ಇನ್ನೋರ್ವ ನಿವೃತ್ತ ಯೋಧ ತಿಮ್ಮಪ್ಪ ನಾಯ್ಕ ಮಾತನಾಡಿ, ಗ್ರಾಮದ ಜನರಿಂದ ನಮಗೆ ಸಿಕ್ಕ ಅದ್ದೂರಿ ಸ್ವಾಗತ,ಪ್ರೀತಿಗೆ ಚಿರರುಣಿಯಾಗಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಯುವ ಸಮೂಹವನ್ನು ಒಗ್ಗೂಡಿಸಿ ಸೈನ್ಯದ ಮಹತ್ವ ಬಗ್ಗೆ ತಿಳಿಸುವ ಕಾರ್ಯಕ್ರಮ ನಡೆಸುತ್ತೇನೆ.ಯುವ ಜನಾಂಗ ಸೈನಿಕರ ಹಾಗೂ ಸೈನ್ಯದ ಬಗ್ಗೆ ಪ್ರೀತಿ ಹೊಂದಿ,ದೇಶ ಸೇವೆಯಲ್ಲಿ ತೊಡಗುವಂತರಾಗಿ ಎಂದು ಕರೆ ನೀಡಿದರು. ಅಳ್ಳಂಕಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಿ.ಎಸ್.ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿ ಸೈನ್ಯದ ಮಹತ್ವ, ದೇಶಪ್ರೇಮದ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಮಂಜುನಾಥ ನಾಯ್ಕ ವಹಿಸಿದ್ದರು. ಗ್ರಾ.ಪಂ ಸದಸ್ಯ ಮಹೇಶ್ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಸೈನಿಕ ಪುರಂದರ ನಾಯ್ಕ, ಸಿಪಿಐ ಭರತ್ ನಾಯ್ಕ, ಗ್ರಾ.ಪಂ ಅಧ್ಯಕ್ಷ ಪ್ರಮೋದ್ ನಾಯ್ಕ, ವಿಘ್ನೇಶ್ವರ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ನಾಯ್ಕ, ಹಿರಿಯರಾದ ಕೃಷ್ಣ ಬೈರ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಬಿಎಲ್ ನಾಯ್ಕ ನಿರೂಪಿಸಿದರು. ವಿನಾಯಕ ನಾಯ್ಕ ವಂದಿಸಿದರು.
ಭವ್ಯ ಮೆರವಣಿಗೆ: ಹುಟ್ಟೂರಿಗೆ ಮರಳಿದ ಯೋಧರಿಗೆ ವಾಹನದಲ್ಲಿ ಅಭೂತಪೂರ್ವವಾಗಿ ಮೆರವಣಿಗೆ ನಡೆಸಿದರು. ಶ್ರೀಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದ ಆವಾರದಿಂದ ಮೆರವಣಿಗೆ ಹೊರಟು ಗೇರುಸೊಪ್ಪಾ ಗ್ರಾಮದಲ್ಲಿ ಸಂಚರಿಸಿ ಪುನಃ ದೇವಾಲಯಕ್ಕೆ ಆಗಮಿಸಿದರು. ಮಹಿಳೆಯರು ಯೋಧರಿಗೆ ಆರತಿ ಬೆಳಗಿ ತಿಲಕವಿಟ್ಟು, ಪುಷ್ಪವೃಷ್ಟಿ ನಡೆಸಿದರು. ಶಾಸಕ ಸುನೀಲ್ ನಾಯ್ಕ ಮೆರವಣಿಗೆ ವೇಳೆ ಆಗಮಿಸಿ ನಿವೃತ್ತ ಸೈನಿಕರಿಗೆ ಅಭಿನಂದಿಸಿದರು.