ಭಟ್ಕಳ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 30ರಿಂದ ಜೂ.1ರವರೆಗೆ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪರವಾಗಿ ಪಾಲ್ಗೊಂಡ ಭಟ್ಕಳದ ತಂಡವು ಜನಪದ ಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಮಂಜುಳಾ ಶಿರೂರ್ಕರ್, ಮೇಧಾ ಕೆ.ಕೆ., ಜಯಶ್ರೀ ಆಚಾರ‍್ಯ, ಸುಮನಾ ಕೆರೆಕಟ್ಟೆ, ಪೂರ್ಣಿಮಾ ಕರ್ಕಿಕರ್, ಗೀತಾ ಭಂಡಾರಿ, ಭವ್ಯಾ ಹೆಗಡೆ, ಗಾಯತ್ರಿ ನಾಯ್ಕ, ಸುಮಲತಾ ನಾಯ್ಕ ಹಾಗೂ ಸೌಮ್ಯ ದೇವಾಡಿಗ ಅವರ ತಂಡವು ಜನಪದ ವೇಷಭೂಷಣಗಳೊಂದಿಗೆ ಜನಪದ ವಾದನಗಳನ್ನು ನುಡಿಸುತ್ತ ಹಾವಭಾವ ಅಭಿನಯದೊಂದಿಗೆ ಗೀತೆಯನ್ನು ಪ್ರಸ್ತುತ ಪಡಿಸಿದ್ದರು. ತಂಡದ ಪ್ರದರ್ಶನವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆಯುವುದರೊಂದಿಗೆ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಸ್ಪರ್ಧೆಯಲ್ಲಿ ಒಟ್ಟೂ ಮೂವತ್ತೆರಡು ತಂಡಗಳು ಭಾಗವಹಿಸಿದ್ದು, ಭಟ್ಕಳದ ತಂಡವು ಮೊದಲ ಪ್ರಯತ್ನದಲ್ಲಿಯೇ ತೃತೀಯ ಬಹುಮಾನ ಗಳಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ವಿಜೇತರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷ ಮೋಹನ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಪದಾಧಿಕಾರಿಗಳು ಹಾಗೂ ಉತ್ತರಕನ್ನಡ ಜಿಲ್ಲೆಯ ಸರ್ಕಾರಿ ನೌಕರರು ಅಭಿನಂದಿಸಿದ್ದಾರೆ.