ನವದೆಹಲಿ:16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ತಿಳಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.
ಜೂನ್ 15 ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಜೂನ್ 29 ಕೊನೆಯ ದಿನಾಂಕ. ನಾಮಪತ್ರಗಳ ಪರಿಶೀಲನೆಯ ಜೂನ್ 30 ಮತ್ತು ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ ಜುಲೈ 2 ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
“ಸಂವಿಧಾನದ ಪರಿಚ್ಛೇದ 62 ರ ಪ್ರಕಾರ, ಅಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಮೊದಲು ಮುಂದಿನ ಅಧ್ಯಕ್ಷರ ಚುನಾವಣೆಯನ್ನು ನಡೆಸಬೇಕು. 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 4,809 ಮತದಾರರು ಮತ ಚಲಾಯಿಸಲಿದ್ದಾರೆ. ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಲು ಸಾಧ್ಯವಿಲ್ಲ” ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಭಾರತದ ಸಂವಿಧಾನದ 54 ನೇ ವಿಧಿಯ ಪ್ರಕಾರ, ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಮತ್ತು ದೆಹಲಿ, ಪುದುಚೇರಿಯ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ಶಾಸಕಾಂಗ ಸಭೆಗಳ ಚುನಾಯಿತ ಸದಸ್ಯರು ಮತದಾನದಲ್ಲಿ ಭಾಗವಹಿಸಬಹುದು
ರಾಜ್ಯಸಭೆ ಮತ್ತು ಲೋಕಸಭೆ ಅಥವಾ ರಾಜ್ಯಗಳ ವಿಧಾನಸಭೆಗಳ ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ. ಅದೇ ರೀತಿ ವಿಧಾನ ಪರಿಷತ್ತಿನ ಸದಸ್ಯರು ಕೂಡ ರಾಷ್ಟ್ರಪತಿ ಚುನಾವಣೆಗೆ ಮತದಾರರಲ್ಲ.
“ಜೈಲಿನಲ್ಲಿರುವವರು ಸಂಸದರು ಪೆರೋಲ್‌ಗೆ ಅರ್ಜಿ ಸಲ್ಲಿಸಿ, ಪೆರೋಲ್ ಪಡೆದರೆ ಮತ ಚಲಾಯಿಸಬಹುದು” ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.