ಶಿರಸಿ:ಪ್ರಸಕ್ತ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಗಳಿಸಿ ಸಾಧನೆಗೈದ ಶಿರಸಿ ಲಯನ್ಸ್ ಶಾಲೆಯ ಹಿರಿಯ ವಿದ್ಯಾರ್ಥಿ ಮನೋಜ್ ರಾಮನಾಥ ಹೆಗಡೆ ಇವರನ್ನು ಜೂ. 8 ,ಬುಧವಾರದಂದು ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಜೊತೆಗೆ 2021 -22 ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ 10 ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕ ಶಕ್ತಿಯಾಗಿ ಅವರಿಗೆ ಬೆನ್ನೆಲುಬಾಗಿ ನಿಂತು ಶೇ 100ಕ್ಕೆ 100 ಫಲಿತಾಂಶಕ್ಕೆ ಕಾರಣರಾದ ಶಿರಸಿ ಲಯನ್ಸ್ ಶಾಲಾ ಶಿಕ್ಷಕ ವೃಂದವನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿರಸಿ ಲಯನ್ಸ್ ಶಾಲೆಯಲ್ಲಿ ಬಹಳಷ್ಟು ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಕೆಲವು ವರ್ಷಗಳ ಕಾಲ ಮುಖ್ಯಶಿಕ್ಷಕಿ ಆಗಿಯೂ ಸೇವೆ ಸಲ್ಲಿಸಿದ ಶ್ರೀಮತಿ ಗೀತಾ ಬಾಯಿ ಹೆಗಡೆಯವರನ್ನು ಗೌರವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ , ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಹೆಗಡೆಯವರ ಮಾರ್ಗದರ್ಶನದಲ್ಲಿ ಶಾಲೆಯ ಕಿರಿಯ ವಿದ್ಯಾರ್ಥಿಗಳು ಸುಶ್ರಾವ್ಯವಾದ ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಪ್ರೊಫೆಸರ್. ಲಯನ್. ರವಿ ನಾಯಕ್ ಇವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ ಶ್ರೀಕಾಂತ ಹೆಗಡೆ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಮನೋಜ್ ಹೆಗಡೆ ಮಾತನಾಡಿ, ಯುಪಿಎಸ್.ಸಿ ಪರೀಕ್ಷೆಯ ತಯಾರಿಯ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು. ಯುಪಿಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ ವಿಶೇಷವಾದ ಬುದ್ಧಿಮತ್ತೆ ಅಗತ್ಯವಿಲ್ಲ. ಹೆಚ್ಚು ಓದುವ ಹಾಗೂ ನಮ್ಮ ಅಭಿಪ್ರಾಯಗಳನ್ನು ಬರಹ ರೂಪದಲ್ಲಿ ಹೊರಗೆಡಹುವ ಪ್ರಯತ್ನದಲ್ಲಿ ಸದಾ ನಿರತರಾಗಿರಬೇಕು. ನಮ್ಮ ಸುತ್ತಲಿನ ಘಟನೆಗಳನ್ನು ಸೂಕ್ಷ್ಮವಾಗಿ ಅವಲೊಕಿಸುವ, ಪ್ರಶ್ನಿಸುವ, ಉತ್ತರ ಕಂಡುಕೊಳ್ಳುವ ಕೆಲಸ ನಿರಂತರವಾಗಿರಲಿ. ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಈ ಒಂದು ಪರೀಕ್ಷೆಯನ್ನು ಎದುರಿಸಿ ಗೆಲ್ಲಬಹುದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಶಿರಸಿ ಲಯನ್ಸ ಶಾಲೆ ನನ್ನ ವ್ಯಕ್ತಿತ್ವ ರೂಪಿಸಿದ ಶಾಲೆ, ಲಯನ್ಸ ಶಾಲೆಯ ಎಲ್ಲಾ ಕಾರ್ಯಚಟುವಟಿಕೆಗಳು ಸರ್ವರಿಗೂ ಮಾದರಿಯಾಗಿದ್ದು ವಿದ್ಯಾರ್ಥಿಯ ಪ್ರಖರ ವ್ಯಕ್ತಿತ್ವ ರೂಪಣೆಗೆ ಸಹಾಯಕವಾಗುತ್ತಿದೆ. ಶಾಲೆಯ ವಿದ್ಯಾಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಯು.ಪಿ.ಎಸ್ಸಿ. ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಲ್ಲಿರುವ ಸಂಶಯ ಪರಿಹರಿಸಿದರು.
ರ‍್ಯಾಂಕ್ ವಿಜೇತರ ಪರವಾಗಿ ರಾಜ್ಯಕ್ಕೆ ಎರಡನೇ ರ‍್ಯಾಂಕ್‌ವಿಜೇತ ವಿದ್ಯಾರ್ಥಿನಿ ಧನ್ಯಾ ಪ್ರಭಾಕರ ಹೆಗಡೆ ತಮ್ಮ ಅನಿಸಿಕೆ ತೆರೆದಿಟ್ಟರು. ಶಿರಸಿ ಲಯನ್ಸ ಶಾಲಾ ಮುಖ್ಯಾಧ್ಯಪಕರಾದ ಶಶಾಂಕ ಹೆಗಡೆ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸಭೆಗೆ ಪರಿಚಯಿಸಿದರು.
ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಕೋಶಾಧ್ಯಕ್ಷರು ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರು, ಮುಖ್ಯ ಅತಿಥಿಗಳಾದ ಎಂ.ಜೆ.ಎಫ್ ಲಯನ್ ಉದಯ ಸ್ವಾದಿ ಎಲ್ಲಾ ಸಾಧಕರನ್ನು ಅಭಿನಂದಿಸಿದರು. ಶ್ರೀಮತಿ ಗೀತಾ ಬಾಯಿ ಹೆಗಡೆಯವರು ಶಾಲೆಯೊಂದಿಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡರು. ಶಾಲೆಯ ಸಹಶಿಕ್ಷಕಿ ಶ್ರೀಮತಿ ಸೀತಾ ಭಟ್, ಗೀತಾ ಹೆಗಡೆಯವರನ್ನು ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪ್ರೊಫೆಸರ್ ಎನ್.ವಿ.ಜಿ ಭಟ್ ರವರು ಸಾಧಕ ವಿದ್ಯಾರ್ಥಿಗಳ ಮತ್ತು ಇವರ ಸಾಧನೆಗೆ ಕಾರಣೀಕರ್ತರಾದ ಶಿಕ್ಷಕರನ್ನು ಶ್ಲಾಘಿಸಿದರು. ಲಯನ್ ವಿನಯ್ ಹೆಗಡೆ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರು. .ವೇದಿಕೆಯಲ್ಲಿ ಶಿರಸಿ ಲಯನ್ಸ ಕ್ಲಬ್ ಕೋಶಾದ್ಯಕ್ಷರಾದ ಲಯನ್ ಅನಿತಾ ಹೆಗಡೆ, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಪ್ರಭಾಕರ ಹೆಗಡೆ, ಲಿಯೋ ಕ್ಲಬ್ ಅಧ್ಯಕ್ಷೆ ಸ್ತುತಿ ತುಂಬಾಡಿ ಉಪಸ್ಥಿತರಿದ್ದರು. ಶಿರಸಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ನ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಶಾಲೆಯ ಸಹಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ಮುಕ್ತಾ ನಾಯ್ಕ ಮತ್ತು ಶ್ರೀಮತಿ ಚೇತನಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.