ಅಂಕೋಲಾ: ಪ್ರಾರ್ಥಿಸುವ ತುಟಿಗಳಿಗಿಂತ, ಸೇವೆ ಮಾಡುವ ಕೈಗಳು ಶ್ರೇಷ್ಠ.ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವ ಪ್ರತಿಫಲ ಬಯಸದೇ ಮಾಡುವ ಸೇವೆ ಎಲ್ಲ ಪೂಜೆ ಪುನಸ್ಕಾರಗಳಿಗಿಂತ ಸರ್ವಶ್ರೇಷ್ಠ ಎಂದು ಲಯನ್ಸ್ ಡಿಸ್ಟ್ರಿಕ್ಟ್ 317ಬಿಯ ಪ್ರಾಂತಪಾಲ ಶ್ರೀಕಾಂತ ಮೋರೆ ಹೇಳಿದರು.
ಅವರು ಲಯನ್ಸ್ ಕ್ಲಬ್ ಕರಾವಳಿಗೆ ಅಧಿಕೃತ ಭೇಟಿಯ ಸಮಾರಂಭದಲ್ಲಿ ಮಾತನಾಡಿ, ‘ಸರ್ವೆಜನಾ ಸುಖಿನೋ ಭವಂತು’ ಎನ್ನುವ ಲಯನ್ಸಿನ ಉದ್ದೇಶ ನಮಗೆಲ್ಲ ಆದರ್ಶವಾಗಬೇಕೆಂದರು. ಲಯನ್ಸ್ ಕ್ಲಬ್ ಕರಾವಳಿ ಮಾಡಿದ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಸಿದರು.
ಲಯನ್ಸ್ ಜಿಲ್ಲಾ ಖಜಾಂಚಿ ಕೃಷ್ಣಾ ಜಿ.ಬಗಲಿ ಮಾತನಾಡಿ, ಶತಮಾನೋತ್ಸವ ಆಚರಿಸಿರುವ, ಜಗತ್ತಿನ 210 ರಾಷ್ಟ್ರಗಳಲ್ಲಿ ವ್ಯಾಪಿಸಿರುವ, ಸೇವಾ ಸಂಸ್ಥೆಗಳಲ್ಲಿ ಅಗ್ರಣಿಯಾಗಿರುವ ಲಾಯನ್ಸ್ ಸೇವಾ ಸಂಸ್ಥೆಯ ಸದಸ್ಯರಾಗುವುದೇ ಹೆಮ್ಮೆಯ ಸಂಗತಿ ಎಂದರು.
ಪಿ.ಎಂ. ಹೈಸ್ಕೂಲಿನ ರೈತಭವನದಲ್ಲಿ ಜರುಗಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಕರುಣಾಕರ, ಲಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆತದ್ದು ನನ್ನ ಸೌಭಾಗ್ಯ ಎಂದರು. ದಾನಿಗಳ ಹಾಗೂ ಲಯನ್ಸ್ ಸದಸ್ಯರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ನಮ್ಮ ಕ್ಲಬ್ 70ಕ್ಕೂ ಹೆಚ್ಚು ಸೇವಾ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಅಗ್ರಣಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಂತಪಾಲ ಶ್ರೀಕಾಂತ ಮೋರೆ ಜೋನ್ ಚೇರ್‍ಪರ್ಸನ್ ಮಹಾಂತೇಶ ರೇವಡಿ ವಲಯಾಧ್ಯಕ್ಷರಾಗಿ ಮಾಡಿದ ಅಪೂರ್ವ ಸೇವೆಯನ್ನು ಗುರುತಿಸಿ ಸೆಂಟಿನರಿ ಪದಕ ಹಾಗೂ ಪ್ರಶಂಸಾ ಪತ್ರ, ಲಯನ್ಸ್ ಜಾಕೆಟ್ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ರಾಮಕೃಷ್ಣ ಗುಂದಿ, ನಿವೃತ್ತ ಪ್ರಾಚಾರ್ಯ ವಿ.ಆರ್.ವೇರ್ಣೆಕರ ಅಭಿನಂದನಾಪರ ಮಾತನಾಡಿ, ಅಂಕೋಲಾ ಲಯನ್ಸ್ ಕ್ಲಬ್ ವಿಶಿಷ್ಟ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಅಂಕೋಲಾ ಜನರ ಮೆಚ್ಚುಗೆ ಗಳಿಸಿದೆ ಎಂದರು.
ಕಾರ್ಯದರ್ಶಿ ಸದಾನಂದ ಶೆಟ್ಟಿ ಹೊನ್ನೆಕೇರಿ ವರದಿಯನ್ನು ಸಾದರಪಡಿಸಿದರು. ಸಂಜಯ ಅರುಂಧೇಕರ ಧ್ವಜವಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಕರುಣಾಕರ ಸ್ವಾಗತಿಸಿದರು. ವಲಯಾಧ್ಯಕ್ಷ ಮಹಾಂತೇಶ ರೇವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್.ಉಡುಪಿ ಅತಿಥಿಗಳನ್ನು ಪರಿಚಯಿಸಿದರು. ಹಸನ್ ಶೇಖ್ ವಂದಿಸಿದರು. ಜಿ.ಆರ್.ತಾಂಡೇಲ್ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕರಾವಳಿಯ ಸ್ಥಾಪಕ ಅಧ್ಯಕ್ಷ ಕೆ.ವಿ.ಶೆಟ್ಟಿ ವೇದಿಕೆಯಲ್ಲಿ, ಸಮಾರಂಭದಲ್ಲಿ ಊರಿನ ಗಣ್ಯರು ಉಪಸ್ಥಿತರಿದ್ದರು.