ಕಾರವಾರ: ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಅವರೊಂದಿಗೆ ಗೌರವದಿಂದ ವರ್ತಿಸದೇ ಇದ್ದರೆ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಲ್ಲಾ ಇಲಾಖೆಗಳಿಗೆ ಸಿಬ್ಬಂದಿ ಹಾಗೂ ಆಡಳಿತಾ ಸುಧಾರಣೆ ಇಲಾಖೆ ಎಚ್ಚರಿಕೆ ನೀಡಿದೆ.
ಸರ್ಕಾರಿ ಕಚೇರಿಗಳಲ್ಲಿ ಕೆಲಸದ ನಿಮಿತ್ತ ತೆರಳುವ ಹಿರಿಯ ನಾಗರೀಕರಿಗೆ ಗೌರವ ಕೊಡುವುದಿಲ್ಲ. ಕೆಲಸ ಮಾಡಿಕೊಡಲು ಘಂಟೆಗಟ್ಟಲೇ ಕಾಯಿಸುತ್ತಾರೆ. ಅಲ್ಲದೇ ಅಲೆದಾಡಿಸುವ ಮೂಲಕ ಗೌರವಿಸುವುದಿಲ್ಲ ಎನ್ನುವ ದೂರು ಹಿಂದಿನಿಂದ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಕಳೆದ ವರ್ಷ ಹಿರಿಯ ನಾಗರೀಕರಿಗೆ ಇಲಾಖೆಗಳಿಗೆ ಕೆಲಸಕ್ಕೆ ಬಂದಾಗ ಗೌರವ ಕೊಡುವಂತೆ ತಿಳಿಸಿತ್ತು.
ಆದರೂ ಹಲವು ಇಲಾಖೆಗಳಲ್ಲಿ ಕೆಲಸಕ್ಕೆಂದು ಹಿರಿಯ ನಾಗರೀಕರು ಹೋದಾಗ ಅಧಿಕಾರಿಗಳು, ಸಿಬ್ಬಂದಿಗಳು ಗೌರವಯುತವಾಗಿ ವರ್ತಿಸುವುದಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು ಸರ್ಕಾರಕ್ಕೆ ಈ ಬಗ್ಗೆ ದೂರನ್ನ ಸಹ ನೀಡಿದ್ದರು. ಈ ಹಿನ್ನಲೆಯಲ್ಲಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಎಚ್ಚರಿಕೆಯನ್ನ ನೀಡಿದೆ.
ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಬಂದಾಗ ಆಸನದ ವ್ಯವಸ್ಥೆ ಮಾಡುವಂತೆ ಹಾಗೂ ಅವರುಗಳ ಮನವಿ/ ಕೋರಿಕೆಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ, ಇಲಾಖೆಗಳು ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಹಿರಿಯ ನಾಗರಿಕರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವಂತೆ ಸ್ಪಷ್ಟ ನಿರ್ದೇಶನದೊಂದಿಗೆ ಕಳೆದ ಜೂನ್ 21ಕ್ಕೆ ಸುತ್ತೋಲೆ ಹೊರಡಿಸಿದ್ದು, ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನ ಇಲಾಖೆಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.
ಇನ್ನು ಸರ್ಕಾರ ಹಿಂದೆ ನೀಡಿದ ಸುತ್ತಲೋಲೆಯನ್ನ ಅಕ್ಷರಶಃ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಪಾಲಿಸುವಂತೆ ಸಚಿವಾಲಯದ ಎಲ್ಲ ಇಲಾಖೆಗಳು ತಮ್ಮ ಅಧೀನದ ಕಚೇರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾಣೆ ತಪಾಸಣೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶ್ ಸುತ್ತೋಲೆ ಹೊರಡಿಸಿದ್ದಾರೆ.