ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಈ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದರು. ಇದೀಗ ಇದೇ ಶಾಲೆಯ ವಿದ್ಯಾರ್ಥಿನಿ ಸಂಜನಾ ಭಟ್ಟ ಮರುಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈಕೆಗೆ 622 ಅಂಕಗಳು ಲಭಿಸಿತ್ತು. ಹೀಗಾಗಿ ಈಕೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಪಡೆಯುವಂತಾಗಿತ್ತು. ಆದರೆ ಫಲಿತಾಂಶ ಬಂದ ಸಂದರ್ಭದಲ್ಲಿಯೂ 625ಕ್ಕೆ 625 ಅಂಕಗಳನ್ನು ಪಡೆಯುವ ಭರವಸೆ ವ್ಯಕ್ತಪಡಿಸಿದ್ದಳು. ಹೀಗಾಗಿ ಮರುಮೌಲ್ಯಮಾಪನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು, ಈಕೆ ರಾಜ್ಯದ ಟಾಪರ್ ಆಗಿ ಗುರುತಿಸಿಕೊಂಡಿದ್ದಾಳೆ.
ನಿರಂತರ ಪರಿಶ್ರಮ ಹಾಗೂ ಶಾಲಾ ಮಟ್ಟದಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿಯೂ ಈಕೆ ಪೂರ್ಣ ಅಂಕಗಳನ್ನೇ ಪಡೆದವಳಾಗಿದ್ದಳು. ಸಂಸ್ಥೆಯವರೂ ಈಕೆಯ ಮೇಲೆ ಭರವಸೆ ಇಟ್ಟಿದ್ದರು. ಇದೀಗ ಈಕೆಯ ನೈಜ ಫಲಿತಾಂಶ ಹೊರಬಂದಿದ್ದು, ಸಂಸ್ಥೆಯವರೂ ಸಂತಸ ವ್ಯಕ್ತಪಡಿಸಿದ್ದಾರೆ. ಸಂಜನಾಳ ಸಾಧನೆಯಿಂದಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿವಿಎಸ್‍ಕೆ ಪ್ರೌಢಶಾಲೆಯಿಂದ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅದಲ್ಲದೆ ಉತ್ತರ ಕನ್ನಡ ಜಿಲ್ಲೆಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸಂಜನಾ ಹೆಸರು ಸೇರ್ಪಡೆಯಾಗಿದ್ದು, ಒಂದೇ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರಥಮ ಸ್ಥಾನ ಪಡೆದಿರುವುದು ಇದೇ ಮೊದಲು ಎಂಬಂತಾಗಿದೆ.
ಫಲಿತಾಂಶ ಘೋಷಣೆಯಾಗಿದ್ದ ಸಂದರ್ಭದಲ್ಲಿಯೇ 625ಕ್ಕೆ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಾಲಿನಲ್ಲಿ ಸೇರಬೇಕಿದ್ದ ಎಲ್ಲಾ ಅರ್ಹತೆ ಹೊಂದಿದ್ದ ಸಂಜನಾಳಿಗೆ ಇದೀಗ ನ್ಯಾಯ ದೊರೆತಂತಾಗಿದೆ. ಈಕೆಯ ಸಾಧನೆಗೆ ಈಕೆಯ ಪಾಲಕರು ಹಾಗೂ ಸಿವಿಎಸ್‍ಕೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಮಾ ಪ್ರಭು, ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರು, ಕಾರ್ಯದರ್ಶಿ, ವಿಶ್ವಸ್ಥರು ಹಾಗೂ ಶಾಲೆಯ ಹಿತೈಷಿಗಳು ಶುಭಾಶಯ ಕೋರಿದ್ದಾರೆ.