ಶಿರಸಿ : ನಗರದ ವುಮೆನ್ಸ ಹಬ್ ಶಿರಸಿಯಲ್ಲಿ ಇತ್ತೀಚಿಗೆ ಬ್ಯಾಗ್ ಮೇಕಿಂಗ್ ತರಬೇತಿ ಕಾರ್ಯಕ್ರಮದ ಪ್ರಮಾಣ ಪತ್ರ ವಿತರಣೆಯನ್ನು ಎಫ್.ವಿ.ಟಿ.ಆರ್.ಎಸ್. ಸಂಸ್ಥೆ ಬೆಂಗಳೂರು ಇವರಿಂದ ನಡೆಸಲಾಯಿತು.
ಶಿರಸಿ ಸುತ್ತಮುತ್ತಲಿನ ಭಾಗದ 18 ರಿಂದ 35 ವರ್ಷದ ಒಳಗಿನ ಅವಿದ್ಯಾವಂತ ಮಕ್ಕಳಿಗಾಗಿ ಎಫ್.ವಿ.ಟಿ.ಆರ್.ಎಸ್ ಸಂಸ್ಥೆಯಿಂದ ಉದ್ಯೋಗ ಆಧಾರಿತ 3 ತಿಂಗಳ ಬ್ಯಾಗ್ ಮೇಕಿಂಗ್ ತರಬೇತಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದದಲ್ಲಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಕೈಗಾರಿಕಾ ಘಟಕದ ಅಧ್ಯಕ್ಷ, ಶಿರಸಿ ಸ್ಟೀಲ್ ಫಾಬ್ರಿಕೇಶನ್ ಅಧ್ಯಕ್ಷ ಮತ್ತು ಉಂಚಳ್ಳಿ ಗ್ರಾಮಪಂಚಾಯತ್ ಸದಸ್ಯ ಎ .ಕೆ . ನಾಯ್ಕ್ ಮಾತನಾಡಿ, ಮಹಿಳಾ ಆರ್ಥಿಕ ಸಬಲೀಕರಣದ ಉದ್ದೇಶ , ಇಂದಿನ ದಿನಮಾನಗಳಲ್ಲಿ ಯಶಸ್ವಿ ಉದ್ಯಮಿಗಳಾಗಲು ಬೇಕಾಗುವಂತ ಕೌಶಲ್ಯಗಳು ಮತ್ತು ಸ್ವಂತ ಉದ್ಯೋಗಕ್ಕೆ ಬೇಕಾಗುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ತಾವು ಝೀರೋದಿಂದ ಹೀರೊ ಆದಂತ ತಮ್ಮದೇ ಜೀವನಾನುಭವವನ್ನು ತಮ್ಮ ಹಾಸ್ಯಮಯ ಮಾತಿನಲ್ಲಿ ಹೇಳಿದರು.
ಮತ್ತೊಬ್ಬ ಅತಿಥಿ ಆಗಮಿಸಿದ ಅರುಣಾ ಭಟ್ ಅವರು ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು . ಮಹಿಳೆಯರು ನಿರ್ಧಿಷ್ಟ ಗುರಿ ಇಟ್ಟುಕೊಂಡು , ಸಾಧಿಸುವ ಛಲದಿಂದ ಗುರಿ ಮುಟ್ಟಬೇಕು.ತರಬೇತಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ ಎಂದರು.
ಎಫ್. ವಿ. ಟಿ. ಆರ್. ಎಸ್ ಸಂಸ್ಥೆಯ ಕ್ಷೇತ್ರ ಉಸ್ತುವಾರಿ ಅಧಿಕಾರಿ ಮದನ್ ಗೌಡರ್ ಮಾತನಾಡಿ ದೇಶದಲ್ಲಿ ಅವಿದ್ಯಾವಂತ ನಿರುದ್ಯೋಗಸ್ಥರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು, ಎಫ್.ವಿ.ಟಿ. ಆರ್.ಎಸ್ ಸಂಸ್ಥೆ ಕಳೆದ 29 ವರ್ಷಗಳಿಂದ ಅಸಂಘಟಿತ ವಲಯದ ನಿರುದ್ಯೋಗಸ್ಥ ಬಡ ಯುವಕ ಯುವತಿಯರಿಗೆ ಔದ್ಯೋಗಿಕ ತರಬೇತಿ ನೀಡುವುದು ಮತ್ತು ಸ್ವಂತ ಉದ್ಯೋಗ, ಗುಂಪು ಉದ್ಯೋಗ ಮಾಡಲು ಸಹಾಯ ಮತ್ತು ಪ್ರೇರಣೆ ನೀಡುವುದರ ಮುಖಾಂತರ ಅವರ ಆದಾಯದಲ್ಲಿ ಬದಲಾವಣೆ ತರುವಂತಹ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಗ್ ಮೇಕಿಂಗ್ ತರಬೇತಿ ತರಬೇತುದಾರರಾದ ವೀಣಾ ಹೆಗಡೆ ಮತ್ತು ಎಲ್ಲ ಅಭ್ಯರ್ಥಿಗಳು ಉಪಸ್ಥಿತರಿದ್ದರು.