ಬೆಂಗಳೂರು: ಶಾಲಾ ಪಠ್ಯಪುಸ್ತಕ ಸಮಿತಿಯ ಸಾಲು-ಸಾಲು ವಿವಾದಗಳ ಕೇಂದ್ರ ಬಿಂದುವಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಯಿಂದ ಕೈಬಿಡಲಾಗಿದೆ.
ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದು, ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಅವರನ್ನು ಈ ಮೊದಲು ಸರ್ಕಾರವು ನೇಮಿಸಿತ್ತು. ಆದರೆ ಸಾಲುಸಾಲು ವಿವಾದಗಳು ಎದುರಾಗಿತ್ತು. ಇದೀಗ ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಅಧ್ಯಾಯ 4.2ರ ಹೊಸ ಧರ್ಮಗಳ ಉದಯ ಪಠ್ಯಭಾಗದ ಪರಿಷ್ಕರಣೆ ಈ ಮೊದಲು ಸರ್ಕಾರ ಮುಂದಾಗಿತ್ತು. ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥ ಅವರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯದ ಪರಿಷ್ಕರಣೆ ವಿವಾದ ಹಿನ್ನಲೆಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೈಬಿಡಲು ಸರ್ಕಾರ ಮುಂದಾಗಿತ್ತು. ಇದೀಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ನಾಗೇಶ್ ಹೇಳಿದ್ದಾರೆ.
ಶಾಲಾ ಪಠ್ಯಪುಸ್ತಕ ಸಮಿತಿ ವಿಸರ್ಜನೆ: ಲೇಖಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ (ಜೂನ್ 3) ವಿಸರ್ಜಿಸಿದ್ದರು. ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ ಎಂಬ ಸೂಚನೆಯನ್ನೂ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ನೀಡಿದ್ದರು. ಆ ಮೂಲಕ ಪರೋಕ್ಷವಾಗಿ ಸಮಿತಿಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದರು.