ಕಾರವಾರ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲೋನ್ ಆ್ಯಪ್ ಮುಖಾಂತರ ಸಾಲ ಕೊಡುವ ಸೈಬರ್ ವಂಚಕರ ಜಾಲವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ರಾಜ್ಯದ ಸಾಕಷ್ಟು ಜನ ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿ ಮಾನಸಿಕವಾಗಿ ತೊಂದರೆಗೊಳಪಡುತ್ತಿದ್ದಾರೆ. ಈ ಬಗ್ಗೆ ದೂರುಗಳು ದಾಖಲಾಗುತ್ತಿದ್ದು, ಎಚ್ಚರ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಂಚನೆ ಹೇಗೆ?: ಸೈಬರ್ ವಂಚಕರು ಸಾರ್ವಜನಿಕರಿಗೆ ತಾವು ಲೋನ್ ಆ್ಯಪ್ ಮುಖಾಂತರ ತ್ವರಿತಗತಿಯಲ್ಲಿ ಸಾಲ ನೀಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನು ನೀಡುವ ಮೂಲಕ ಆಸೆ, ಆಮೀಷಗಳನ್ನು ಒಡ್ಡುತ್ತಾರೆ. ಇದನ್ನು ನಿಜವೆಂದು ನಂಬಿ ಆ್ಯಪ್‍ಗಳನ್ನು ತಮ್ಮ ಮೊಬೈಲ್‍ನಲ್ಲಿ ಡೌನಲೋಡ್ ಮಾಡಿಕೊಂಡರೆ ಅವರ ಮೊಬೈಲ್‍ನಲ್ಲಿರುವ ವೈಯಕ್ತಿ ಮಾಹಿತಿಗಳಾದ ಕಾಂಟ್ಯಾಕ್ಟ್ಸ್, ಫೋಟೋ, ವಿಡಿಯೋ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳ ಮಾಹಿತಿಗಳೂ ವಂಚಕರ ಕೈ ಸೇರುತ್ತದೆ. ವಂಚಕರು ಒಂದು ವಾರದ ಮಟ್ಟಿಗೆ ಸಾಲವನ್ನು ನೀಡುವ ಬಗ್ಗೆ ಹೇಳಿ ಅತ್ಯಧಿಕ ಮಟ್ಟದ ಬಡ್ಡಿಯನ್ನು ವಸೂಲು ಮಾಡುತ್ತಾರೆ. ಒಂದು ವೇಳೆ ಸಾಲವನ್ನು ನಿಗದಿತ ಸಮಯದಲ್ಲಿ ಭರಣ ಮಾಡಿದರೂ ಸಹಾ ಪುನಃ ಹಣದ ಬೇಡಿಕೆ ಇಟ್ಟು, ಅದನ್ನು ನೀಡದೇ ಇದ್ದರೆ ಮೊಬೈಲ್‍ನಿಂದ ಮೊದಲೇ ಪಡೆದುಕೊಂಡಿರುವ ವೈಯಕ್ತಿಕ ಮಾಹಿತಿಗಳ ಸಹಾಯದಿಂದ ಸಂತ್ರಸ್ತರ ಗೆಳೆಯರಿಗೆ, ಸಂಬಂಧಿಕರಿಗೆ ಚಾರಿತ್ರ್ಯ ಹರಣವಾಗುವ ಸಂದೇಶಗಳನ್ನು ಹಾಗೂ ಎಡಿಟ್ ಮಾಡಿರುವ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಮಾನಸಿಕವಾಗಿ ತೊಂದರೆ ಕೊಡಲು ಪ್ರಾರಂಭಿಸುತ್ತಾರೆ.
ಎಚ್ಚರ ವಹಿಸಿ: ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಅಥವಾ ತಮ್ಮ ಮೊಬೈಲ್‍ಗಳಿಗೆ ಸಾಲ ಕೊಡುತ್ತೇವೆ ಎಂದು ಬಂದಿರುವ ಸಂದೇಶಗಳ ಮೇಲೆ ವಿಶ್ವಾಸ ಮಾಡಿ ಅನಧಿಕೃತವಾಗಿರುವ ಲೋನ್ ಆ್ಯಪ್‍ಗಳನ್ನು ಇನ್ಸ್ಟಾಲ್ ಮಾಡಿಕೊಂಡು ಸಾಲ ಮಾಡುವ ದುಸ್ಸಾಹಸಕ್ಕೆ ಹೋಗಿ ಮೋಸ ಹೋಗಬಾರದಾಗಿ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ. ಈ ಲೋನ್ ಆ್ಯಪ್‍ಗಳಿಗೆ ಸರ್ಕಾರದಿಂದ ಯಾವುದೇ ಮಾನ್ಯತೆ ಇರುವುದಿಲ್ಲ. ಈಗಾಗಲೇ ಕೇಂದ್ರ ಸರ್ಕಾರವು ಇಂತಹ ಸಾಕಷ್ಟು ಲೋನ್ ಆ್ಯಪ್‍ಗಳನ್ನು ಸ್ಥಗಿತಗೊಳಿಸಿದ್ದರೂ ಸಹ ಸೈಬರ್ ವಂಚಕರು ನಾಯಿಕೊಡೆಗಳಂತೆ ಮತ್ತೆ ಮತ್ತೆ ಹೊಸ ಹೊಸ ಲೋನ್ ಆ್ಯಪ್‍ಗಳನ್ನು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕಾಗಿ ಕೋರಿದೆ. ಒಂದುವೇಳೆ ಈ ರೀತಿಯ ತೊಂದರೆಗೆ ಒಳಗಾಗಿದ್ದರೆ ಕೂಡಲೇ http://www.cyberpolice.gov.xn--in%20u-gva/ ಗೆ ದೂರು ನೀಡಲು ತಿಳಿಸಿದೆ.