
ಯಲ್ಲಾಪುರ: ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧಡೆ ಕಿಡಿಗೇಡಿಗಳು ಎಸೆದಿದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯತ ವತಿಯಿಂದ ಶನಿವಾರ ಶ್ರಮದಾನ ನಡೆಸಿ ಸ್ವಚ್ಚಗೊಳಿಸಲಾಯಿತು.
ತಟಗಾರ ಗ್ರಾಮದ ರಬ್ದಮನೆ ಘಟ್ಟ, ನಿಸರ್ಗಮನೆ ರಸ್ತೆ ಹಾಗೂ ಕೊಂಬೆಪಾಲ್ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ತುಂಬಿದ್ದವು. ಗಾಜಿನ ಬಾಟಲಿಗಳನ್ನು ಒಡೆದು ರಸ್ತೆಯ ಮೇಲೆ ಚೆಲ್ಲಲಾಗಿತ್ತು. ಈಚೆಗೆ ನಡೆದ ವಾರ್ಡ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪ್ರದೇಶವನ್ನು ಸ್ವಚ್ಚಗೊಳಿಸುವಂತೆ ಜನ ಆಗ್ರಹಿಸಿದ್ದರು. ಸಭೆಯಲ್ಲಿ ನೀಡಿದ ಭರವಸೆಯಂತೆ, ಶನಿವಾರ ಬೆಳಗ್ಗೆ ಗ್ರಾಮ ಪಂಚಾಯತ ವತಿಯಿಂದ ರಸ್ತೆಯ ಎರಡೂ ಬದಿ ಬಿದ್ದಿದ್ದ ಭಾರೀ ಪ್ರಮಾಣದ ತ್ಯಾಜ್ಯವನ್ನು ಆರಿಸಲಾಗಿದೆ. ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ತ್ಯಾಜ್ಯ ಎಸೆಯುವವರಿಗೆ 1ಸಾವಿರ ರೂ ದಂಡ ವಿಧಿಸುವಂತೆ ಜನ ಆಗ್ರಹಿಸಿದ್ದಾರೆ.