ಕಾರವಾರ: ನವವಿವಾಹಿತೆಯ ಸಾವಿಗೆ ಕಾರಣರಾದ ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಕರ್ನಾಟಕ ಮೆಡಿಕಲ್ ಕೌನ್ಸಿಲ್, ಮಹಿಳಾ ಹಕ್ಕು ಆಯೋಗ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಯಾಗಿ ಕೇವಲ 18 ದಿನ ಕಳೆದಿದ್ದ ನವವಿವಾಹಿತೆ ಸನಾಳನ್ನು ಜ್ವರದ ಕಾರಣಕ್ಕೆ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯ ವೈದ್ಯರು ಅಲ್ಲಿಲ್ಲದ ಕಾರಣ ತಮ್ಮ ಮಗನಿಗೆ ಫೋನ್ ಮೂಲಕ ತಿಳಿಸಿ, ನರ್ಸ್ ಕಡೆಯಿಂದ ನಾಲ್ಕು ಇಂಜೆಕ್ಷನ್ ಅನ್ನು ಆಕೆಗೆ ನೀಡಲಾಗಿದೆ. ಇದರಿಂದಾಗಿ ಅಸ್ವಸ್ಥಗೊಂಡ ಆಕೆಯನ್ನು ತಮ್ಮ ಬಳಿ ಆಗಲ್ಲವೆಂದು ವೈದ್ಯರ ಮಗನೇ ಅಂಬ್ಯುಲೆನ್ಸ್ ಮಾಡಿಕೊಂಡು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎಂದು ಹೇಳಿದರು.
ಆಕೆಯನ್ನು ದಾಖಲಿಸಿದ್ದ ಬಗ್ಗೆಯಾಗಲಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದ ಡಿಸ್ಚಾರ್ಜ್ ಸಮರಿಯನ್ನಾಗಲಿ ಆಸ್ಪತ್ರೆಯವರು ನೀಡಿಲ್ಲ. ದುರದೃಷ್ಟವಶಾತ್ ಆಕೆ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರ ಅಚಾತುರ್ಯವೇ ಕಾರಣವೆಂದು ಪೊಲೀಸ್ ದೂರು ಕೂಡ ದಾಖಲಿಸಲಾಗಿದೆ. ಆದರೆ ಈ ನಡುವೆ ವೈದ್ಯರು ಕುಟುಂಬದವರನ್ನು ಹಾಗೂ ಪ್ರಮುಖರನ್ನು ಆಸ್ಪತ್ರೆಗೆ ಕರೆದು ಮಾನವೀಯತೆ ದೃಷ್ಟಿಯಿಂದ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ತದನಂತರ ಅದನ್ನು ಕೇಳಲು ಹೋದಾಗ ತಮ್ಮ ಮಾನವನ್ನು ಮಾಧ್ಯಮಗಳಲ್ಲಿ ಹರಾಜು ಹಾಕಿದ್ದೀರಿ, ನಾನು ಪರಿಹಾರ ನೀಡುವುದಿಲ್ಲ ಎಂದು ಹೇಳಿದ್ದು, ಇದರಿಂದಾಗಿ ಕುಟುಂಬಸ್ಥರಿಗೆ ಬೇಸರ ಉಂಟಾಗಿದೆ ಎಂದರು.
ಮೃತಳ ಕುಟುಂಬಕ್ಕೆ ಪರಿಹಾರ ಬೇಕಾಗಿಲ್ಲ. ಆಕೆ ಬಡ ಕುಟುಂಬದ ಯುವತಿಯಾಗಿದ್ದ ಕಾರಣ ವೈದ್ಯರು ಮಾನವೀಯತೆ ದೃಷ್ಟಿಯಲ್ಲಿ ಪರಿಹಾರ ನೀಡುವುದಾಗಿ ಹೇಳಿದ್ದರಿಂದ ಕುಟುಂಬದವರು ವೈದ್ಯರನ್ನು ಪರಿಹಾರಕ್ಕಾಗಿ ಭೇಟಿ ಮಾಡಿದ್ದರು. ಇದೀಗ ಅವರು ಹಣ ನೀಡದಿದ್ದರೂ ವೈದ್ಯರಿಂದ ಹಣ ಪಡೆದು ರಾಜಿ ಮಾಡಿಕೊಂಡಿದ್ದಾರೆಂದು ಊರಿನಲ್ಲಿ ಸುದ್ದಿ ಹರಡಿದೆ. ವೈದ್ಯರು ಕುಟುಂಬಕ್ಕೆ ಒಂದೇ ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಂಡಾರಿ ಸಮಾಜದ ಮಹಿಳಾ ತಾಲೂಕಾಧ್ಯಕ್ಷೆ ಛಾಯಾ ಜಾವಕರ, ನಗರಸಭಾ ಸದಸ್ಯ ಮುನ್ನಾ ರೇವಂಡಿಕರ, ಕಡವಾಡ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧೀರ ಸಾಳಸ್ಕರ, ಅಶ್ವಿನಿ ಮಾಕರ, ಗುರು ನಾಯ್ಕ, ಉದ್ದಾಸ ಗೋವೆಕರ ಸೇರಿದಂತೆ ಅನೇಕರು ಇದ್ದರು.