ಕಾರವಾರ: ಕರ್ನಾಟಕ ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ವಿಭಾಗ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ‘ಬಿತ್ತೋತ್ಸವ’ ಕಾರ್ಯಕ್ರಮವನ್ನು ಗಿಡ ನೆಡುವ ಹಾಗೂ ಬೀಜ ಬಿತ್ತುವ ಮೂಲಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,ಹಿಂದಿನ ತಲೆಮಾರಿನಿಂದ ಬಂದ ಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಪೂರ್ವಜರು ನೀಡಿದ ಪ್ರಕೃತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ನೂತನವಾಗಿ ಪ್ರತಿ ತಾಲೂಕಿನಿಂದ 100 ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಪರಿಸರದ ಬಗ್ಗೆ ತರಬೇತಿ ನೀಡಿ ಅವರನ್ನು ಒಂದು ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಲಾಗುತ್ತದೆ. ನಮ್ಮ ಸುತ್ತ ಇರುವ ಮರ-ಗಿಡಗಳ ಬಗ್ಗೆ ಅರಿವನ್ನ ಪಡೆಯಬೇಕು ಅದಕ್ಕೆ ಇಂತಹ ಕಾರ್ಯಕ್ರಮ ಅವಶ್ಯಕ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ ಕೆ.ಸಿ. ಮಾತನಾಡಿ, ಪರಿಸರವನ್ನು ರಕ್ಷಿಸಿ ಬೆಳೆಸುವ ಹೊಣೆ ನಮ್ಮೆಲ್ಲರದಾಗಿದ್ದು ಪರಿಸರ ದಿನಾಚರಣೆ ಅಂಗವಾಗಿ ಒಂದು ವಾರಗಳ ಕಾಲ ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರಾಜ್ಯದ 50 ವಿಭಾಗಗಳಲ್ಲಿ ಹಾಗೂ 228 ವಲಯಗಳಲ್ಲಿ ಬೀಜ ಬಿತ್ತುವ ಮುಲಕ ಮುಂದಿನ ಭವಿಷ್ಯಕ್ಕೆ ಪರಿಸರವನ್ನು ಬೆಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯ್ಕ, ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಸಿ. ಹಾಗೂ ಅರಣ್ಯ ಸಿಬ್ಬಂದಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಎನ್‍ಎಸ್‍ಎಸ್, ಸ್ಕೌಟ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಇನ್ನಿತರ ಅಧಿಕಾರಿ, ಸಿಬ್ಬಂದಿ ಇದ್ದರು.