ದಾಂಡೇಲಿ:ನಮ್ಮೆಲ್ಲರ ಆರೋಗ್ಯ ವರ್ಧನೆಗೆ ಯೋಗ ಪರಿಣಾಮಕಾರಿಯಾದ ದಿವ್ಯೌಷಧವಾಗಿದೆ. ಮಾನಸಿಕ, ದೈಹಿಕ ಸದೃಢತೆಗೆ ಯೋಗಾಭ್ಯಾಸಗಳನ್ನು ನಿತ್ಯ ಮಾಡುವುದನ್ನು ರೂಢಿಗೊಳಿಸಬೇಕೆಂದು ಯೋಗ ಶಿಕ್ಷಕಿ ಕವಿತಾ ಪೂಜಾರ ಹೇಳಿದರು.
ನಗರದ ಇ.ಎಸ್.ಐ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತವಾಗಿ ಇ.ಎಸ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೌಸ್ ಸೈಯದ್ ಅವರ ನೇತೃತ್ವದಲ್ಲಿ ಉಚಿತ ಯೋಗ ಶಿಬಿರಕ್ಕೆ ಚಾಲನೆಯನ್ನು ನೀಡಲಾಯಿತು.
ಯೋಗ ಶಿಬಿರವನ್ನು ಉದ್ಘಾಟಿಸಿದ ಅವರು , ಯೋಗಾಭ್ಯಾಸದಲ್ಲಿ ತೊಡಗಿಕೊಂಡವರಿಗೆ ರೋಗಬಾಧೆಯಿರುವುದಿಲ್ಲ. ಯೋಗವನ್ನು ನಮ್ಮ ಬದುಕಿನ ಅವಿಭಾಜ್ಯ ಅಂಗವೆಂದು ಭಾವಿಸಿ, ರೂಢಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಗೌಸ್ ಸೈಯದ್, ಜೂ.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಜೂ.21ರವರೆಗೆ ಪ್ರತಿದಿನ ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ ಯೋಗ ಶಿಬಿರ ನಡೆಯಲಿದೆ. ಯೋಗಾಭ್ಯಾಸದ ಮಹತ್ವವನ್ನು ಇಡೀ ವಿಶ್ವವೆ ಅರಿತುಕೊಂಡಿದೆ. ರೋಗ ಬಂದ ನಂತರ ಪರಿತಪಿಸುವುದಕ್ಕಿಂತ ರೋಗ ಬರದಂತೆ ತಡೆಗಟ್ಟಲು ಹಾಗೂ ಆರೋಗ್ಯದಿಂದಿರಲು ಯೋಗವೊಂದೆ ಸರಳ ಮಾರ್ಗ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಇ.ಎಸ್.ಐ ಆಸ್ಪತ್ರೆಯ ಕಾರ್ಮಿಕ ವಿಮಾ ವಿಭಾಗದ ವ್ಯವಸ್ಥಾಪಕ ಪ್ರಮೋದ್, ತೇಜಸ್ ದಿವಗಿ, ಆಸ್ಪತ್ರೆಯ ಕಚೇರಿ ಅಧೀಕ್ಷಕ ವಿನಾಯಕ ಪವಾರ್ ಉಪಸ್ಥಿತರಿದ್ದರು. ಆನಂತರ ಯೋಗ ಶಿಕ್ಷಕಿ ಕವಿತಾ ಪೂಜಾರ ಅವರಿಂದ ಯೋಗ ಶಿಬಿರ ನಡೆಯಿತು. ಶಿಬಿರದಲ್ಲಿ ಇ.ಎಸ್.ಐ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾರ್ಮಿಕರು ಭಾಗವಹಿಸಿದ್ದರು.