ಯಲ್ಲಾಪುರ: ಪಟ್ಟಣದ ಟಿ.ಎಂ.ಎಸ್ ಸಭಾಭವನದಲ್ಲಿ ಮಂಗಳವಾರ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಆಶ್ರಯದಲ್ಲಿ ಬೇಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆಗಳನ್ನು ವಿರೋಧಿಸಿ ಮಂಚಿಕೇರಿಯಲ್ಲಿ ಜೂ.14 ರಂದು ನಡೆಯುವ ಜನಜಾಗೃತಿ ಸಮಾವೇಶದ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖ ಅನಂತ ಹೆಗಡೆ ಅಶೀಸರ ಮಾತನಾಡಿ,ಬೇಡ್ತಿ ಅಘನಾಶಿನಿ ನದಿ ನೀರನ್ನು ಬಯಲು ಪ್ರದೇಶಗಳಿಗೆ ಹರಿಸುವ ಸರಕಾರ ಪ್ತಸ್ತಾಪನೆಗೆ ವಿರೋಧ ವ್ಯಕ್ತಪಡಿಸಿದರೂ,ಸರಕಾರ ಯೋಜನಾವರದಿ ಸಿದ್ದಪಡಿಸಿ ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಲು ಕಾರ್ಯಾಚರಣೆ ಮುಂದುವರಿಸಿದೆ.ಹಾಗಾಗಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಜೂ.೧೪ ರಂದು ಸಂಜೆ ಮಂಚಿಕೇರಿಯಲ್ಲಿ ಜನಜಾಗೃತಿ ಪ್ರತಿಭಟನಾ ಸಭೆ ಆಯೋಜಿಸಲಾಗಿದ್ದು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಎಂ.ಎಲ್ಸಿ ಶಾಂತಾರಾಮ ಸಿದ್ದಿ ಮಾತನಾಡಿ,ಮಂಚಿಕೇರಿ ಸಮಾವೇಶದಲ್ಲಿ ನಿಶ್ಚಿತವಾಗಿ ಪಾಲ್ಗೊಳ್ಳುವ ಮೂಲಕ ಜನತೆಯ ವಿರೋಧವನ್ನು ಸರಕಾರಕ್ಕೆ ತಲ್ಪಿಸಬೇಕು. ಜುಲೈದಲ್ಲಿ ನಡೆಯುವ ಅಧಿವೇಶನದಲ್ಲಿ ಸ್ಪಷ್ಟವಾಗಿ ದ್ವನಿ ಎತ್ತುವುದಾಗಿ ಹೇಳಿದರು.
ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ,”ಸಮಾವೇಶದ ಯಶಸ್ವಿಗೆ ಯೋಜನಾ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಸದಸ್ಯರು ಭಾಗವಹಿಸುವಂತಾಗಬೇಕು.ಜಿಲ್ಲೆಯ ಎಲ್ಲಾ ಶಾಸಕರೂ ಯೋಜನೆಯ ವಿರೋಧಿಸಿ ಸಹಿಮಾಡಿ ಸಿ.ಎಂಗೆ ಸಲ್ಲಿಸಬೇಕು” ಎಂದರು.
ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ,ಪ್ರಮುಖರಾದ ನಾರಾಯಣ ಹೆಗಡೆ ಗಡಿಕೈ,ನಾಗೇಶ ಪಣತಗೇರಿ,ಶ್ರೀಪಾದ ಹೆಗಡೆ,ಪಿ.ಜಿ.ಭಟ್ಟ ಬರಗದ್ದೆ,ಭಾಸ್ಕರ ಹೆಗಡೆ ಗೇರಾಳ,ಕೆ.ಟಿ.ಹೆಗಡೆ,ಗಣಪತಿ ಬೋಳಗುಡ್ಡೆ,ಟಿ.ಆರ್.ಹೆಗಡೆ ತೊಂಡೆಕೇರಿ,ವೆಂಕಟ್ರಮಣ ಬೆಳ್ಳಿ,ಮುಂತಾದವರು ಇದ್ದರು.