ಮುಂಡಗೋಡ: ತಾಲೂಕಿನ ಪಾಳಾ ಕ್ರಾಸ್‍ನಿಂದ ಪಾಳಾ ಗ್ರಾಮಕ್ಕೆ ತಲುಪುವ ಜಿಲ್ಲಾ ರಸ್ತೆಯನ್ನು ಸುಮಾರು 2 ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯಲ್ಲಿ ಬಿರುಕು ಬಿಟ್ಟಿರುವುದರಿಂದ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಡಾಂಬರೀಕರಣ ರಸ್ತೆ ಮಾಡಿದರೆ ಬೇಗನೆ ಹಾಳಾಗುತ್ತದೆ ಕಾಂಕ್ರೀಟ್ ರಸ್ತೆ ಮಾಡಿದರೆ ಬಹುವರ್ಷಗಳ ಬಾಳಿಕೆ ಬರುತ್ತದೆ ಎಂದುಕೊಂಡ ಗ್ರಾಮಸ್ಥರಿಗೆ ರಸ್ತೆಗೆ ಬಿರುಕು ಬಿಟ್ಟಿರುವುದರಿಂದ ಇನ್ನೂ ರಸ್ತೆ ಹಾಳಾಗಲು ಬಹಳ ಸಮಯವಿಲ್ಲ. ವಾಹನ ಸಂಚಾರಕ್ಕೆ ಸಂಚಕಾರ ಬರುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಗ್ರಾಮದ ಮುಖ್ಯ ರಸ್ತೆ ಕಾಂಕ್ರೀಟ್ ರಸ್ತೆಯಾಗಿದೆ ಎಂದು ಗ್ರಾಮಸ್ಥರು ಖುಷಿ ಪಟ್ಟಿದ್ದರು. ಆದರೆ ಅವರ ಖುಷಿ ಕೇವಲ ಎರಡು ವರ್ಷಗಳಿಗೆ ಸೀಮಿತವಾದಂತಾಗಿದೆ. ಇನ್ನೂ 2 ವರ್ಷಗಳು ಪೂರ್ಣಗೊಂಡಿಲ್ಲ. ಕಾಂಕ್ರೀಟ್ ರಸ್ತೆಗೆ ಅಲ್ಲಲ್ಲಿ ಬಿರುಕು ಬಿಡಲು ಪ್ರಾರಂಭವಾಗಿದೆ. ಈ ರಸ್ತೆಯು ತಾಲೂಕಿನ ಹುಬ್ಬಳ್ಳಿ- ಶಿರಸಿ ರಾಜ್ಯ ಹೆದ್ದಾರಿ 69ರಿಂದ ಪಾಳಾ ಕ್ರಾಸ್‍ನಿಂದ ಹಾದು ಪಾಳಾ ಗ್ರಾಮದಿಂದ ಹಾನಗಲ್ ತಾಲೂಕಿಗೆ ಸಂಪರ್ಕಿಸುವ ಜಿಲ್ಲಾ ರಸ್ತೆಯಾಗಿದ್ದು, ಸಂಬಂಧಪಟ್ಟ ಇಲಾಖೆಯು ಕಾಮಗಾರಿ ಪೂರೈಸಿದ ಗುತ್ತಿಗೆದಾರರಿಂದ ರಸ್ತೆಯನ್ನು ಸರಿಮಾಡಿಸಿಕೊಡಬೇಕೆಂದು ಪಾಳಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.