ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಹಾಗೂ ಮಲವಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕ ವಿ.ಎಸ್.ಭಟ್ ಸೋಮವಾರ ನಸುಕಿನಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ನಾಲ್ಕು ದಿನಗಳ ಹಿಂದೆ ತೆಲಂಗಾರದ ಮನೆಯಲ್ಲಿ ಬೈಕ್ ನಿಲ್ಲಿಸುವ ಸಂದರ್ಭದಲ್ಲಿ ಕುಸಿದುಬಿದ್ದಿದ್ದ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹುಬ್ಬಳ್ಳಿಯ ಮತ್ತೊಂದು ಹೈಟೆಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ನಸುಕಿನಲ್ಲಿ ನಿಧನರಾಗಿದ್ದಾರೆ.
ಮೂಲತಃ ತಾಲೂಕಿನ ತೆಲಂಗಾರ ಗ್ರಾಮದ ನಿವಾಸಿಯಾಗಿದ್ದ ಅವರು ತೆಲಂಗಾರ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ, ಪಿಯುಸಿ ಹಾಗೂ ಇಂಟರ್ನ್ಶಿಪ್ ಮುಗಿಸಿದ್ದರು. ನಂತರ ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದರು. ಶಿಕ್ಷಕ ವೃತ್ತಿಗೆ ಸೇರಿದ ನಂತರ ಬಹುತೇಕ ಯಲ್ಲಾಪುರ ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ ಅವರು ಶಿಕ್ಷಕರಾಗಿ ಕೆಲಸ ಮಾಡಿದ್ದರು. ಪ್ರತಿಯೊಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಹೆಸರು ಗಳಿಸಿದ್ದರು.
ಹಾಲಿ ಯಲ್ಲಾಪುರ ತಾಲೂಕ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ, ಯಲ್ಲಾಪುರ ಹವ್ಯಕ ನೌಕರರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಶಿಕ್ಷಕರ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಕಜಾಂಚಿಯಾಗಿ, ವಿವಿಧ ಹುದ್ದೆಗಳನ್ನು ಅಲಂಕರಿಸಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ, ಯಕ್ಷಗಾನ ಅರ್ಥದಾರಿ, ತಾಳಮದ್ದಲೆ ಮತ್ತು ಸ್ಥಳೀಯ ರಂಗಭೂಮಿಯ ಹವ್ಯಾಸಿ ಕಲಾವಿದರಾಗಿ ತೆಲಂಗಾರ ವಜ್ರಳ್ಳಿ ಮುಂತಾದ ಭಾಗದಲ್ಲಿ ಜನಪ್ರಿಯರಾಗಿದ್ದರು.
ಹಲವರ ಸಂತಾಪ: ವಿಶ್ವೇಶ್ವರ ಭಟ್ ನಿಧನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀರಾಮ ಹೆಗಡೆ, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಮಾಜಿ ಅಧ್ಯಕ್ಷ ಜಿ.ಎಂ.ಭಟ್ಟ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಶಿಕ್ಷಕರಾದ ಚಂದ್ರಹಾಸ ನಾಯ್ಕ, ಶಿವಾನಂದ ವೇರ್ಣೇಕರ, ನಿವೃತ್ತ ಶಿಕ್ಷಕರಾದ ಎನ್ ಆರ್ ನಾಯಕ, ಸಿ.ಜಿ.ನಾಯ್ಕ, ಎಚ್.ಬಿ.ನಾಯಕ, ವಿವಿಧ ಶಾಲೆಯ ಶಿಕ್ಷಕರಾದ ಸಂತೋಷ ಕೊಳಗೇರಿ, ಗಂಗಾಧರ ಪಟಗಾರ, ಸುಧಾಕರ ನಾಯಕ, ಹೇಮಂತ ದುರಂದರ, ಮಾತಾ ಡ್ರೈವಿಂಗ್ ಸ್ಕೂಲ್ ಪ್ರಮುಖ ಮಂಜಣ್ಣ ಭಟ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕಾ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.
ಬಿಇಓ ಕಚೇರಿಯಲ್ಲಿ ಅಂತಿಮ ದರ್ಶನ: ದಿವಂಗತ ವಿಶ್ವೇಶ್ವರ ಭಟ್ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯಿಂದ ತೆಲಂಗಾರಕ್ಕೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಸೋಮವಾರ ಬೆಳಿಗ್ಗೆ ಯಲ್ಲಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಕೆಲ ಸಮಯ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಶಿಕ್ಷಕರು ಅಧಿಕಾರಿಗಳು ಆಪ್ತರು ವಿಶ್ವೇಶ್ವರ ಭಟ್ಟ ಅವರಿಗೆ ಅಂತಿಮ ನಮನ ಸಲ್ಲಿಸಿದರು.