ದಾಂಡೇಲಿ: ನಗರದ ಪ್ರಮುಖ ರಸ್ತೆಯಾದ ಜೆ.ಎನ್.ರಸ್ತೆಯ ಅಂದವನ್ನು ಹೆಚ್ಚಿಸಲೆಂದು ರಸ್ತೆ ಮಧ್ಯೆ ಇರುವ ವಿಭಜಕದಲ್ಲಿ ಅಂದ ಚೆಂದದ ಗಿಡಗಳನ್ನು ನೆಡಲಾಗಿದೆ. ಕಳೆದ ವರ್ಷವೂ ನಗರಸಭೆಯ ಮುಂಭಾಗದಿಂದ ಆರಂಭವಾಗಿ ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದಿನವರೆಗೆ ಗಿಡಗಳನ್ನು ನೆಡಲಾಗಿತ್ತು. ಇದೀಗ ಬಾಕಿಯುಳಿದ ಕಡೆಯಿಂದ ಪಟೇಲ್ ವೃತ್ತ ಹಾಗೂ ಪಟೇಲ್ ವೃತ್ತದಿಂದ ಕೆ.ಸಿ ವೃತ್ತಕ್ಕೆ ಹೋಗುವ ರಸ್ತೆಯ ವಿಭಜಕದಲ್ಲಿ ವಿಶ್ವ ಪರಿಸರ ದಿನಾಚರಣೆಯಂದೆ ಗಿಡಗಳನ್ನು ನೆಡಲಾಯಿತು. ಸುಮಾರು ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತಾದರೂ, ಬೇಲಿ ನಿರ್ಮಿಸದಿರುವುದರಿಂದ ನೆಟ್ಟ ಗಿಡಗಳು ಬಿಡಾಡಿ ದನ ಕರುಗಳಿಗೆ ಆಹಾರವಾದಂತಾಗಿದೆ.
ಸರಕಾರದ ಕೆಲಸವಾದರೂ ಮನೆಕೆಲಸ ಎಂಬಂತೆ ಮುತುವರ್ಜಿಯಿಂದ ಮಾಡುತ್ತಿದ್ದಲ್ಲಿ ಮೊದಲೆ ಬಿಡಾಡಿ ದನಕರುಗಳು ತಿನ್ನದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗಿಡಗಳನ್ನು ನೆಡಬಹುದಿತ್ತು. ಆದರೆ ಯಾರ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಇಲ್ಲಿ ಉಳಿದ್ರೆ ಉಳಿಯುತ್ತದೆ ಎಂದು ನೆಟ್ಟಿರುವಂತೆ ಭಾಸವಾಗತೊಡಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.