ಹಳಿಯಾಳ: ಮಹಿಳೆ ತನ್ನ ಮನೆಗೆ ಸಿಮೀತವಾಗಿರದೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಢವಾಗಿರಬೇಕು. ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕೆಂದು ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಅವರು ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಡಿ ತಾಲೂಕಿನ ತತ್ವಣಗಿ ಗ್ರಾಮದಲ್ಲಿ ಮಹಿಳೆಯರಿಗಾಗಿ 30 ದಿನಗಳ ಹೊಲಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಹಿಳೆ ವಿವಿಧ ಕೌಶಲ್ಯಗಳನ್ನು ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ಯಮಶೀಲ ಮಹಿಳೆಯಾಗಬೇಕು. ಪುರುಷರ ಜೊತೆ ಸಮಾನ ಹೆಜ್ಜೆ ಇಟ್ಟು ತನ್ನ ಕುಟುಂಬದ ನಿರ್ವಹಣೆಯಲ್ಲಿ ಸಮಭಾಗಿಯಾಗಬೇಕೆಂದು ತಿಳಿಸಿದರು.
ತತ್ವಣಗಿ ಗ್ರಾ.ಪಂ ಅಧ್ಯಕ್ಷೆ ರಾಜನಬಿ ಅ.ಸಾಹೇಬಖಾನ ಹೊಲಿಗೆ ತರಬೇತಿಯನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗ್ರಾ.ಪಂ ಉಪಾಧ್ಯಕ್ಷೆ ನಾಗವ್ವಾ ಚೆ.ಬೇಗೂರು, ಸದಸ್ಯರಾದ ಅಮೀನಾಬಿ ಸು.ಮುಜಾವರ, ಕಾರ್ಯದರ್ಶಿ ರಾಮಚಂದ್ರ ಮಿಶಾಳಿ, ಎನ್‍ಆರ್‍ಎಲ್‍ಎಮ್ ಸಂಯೋಜಕಿ ಕವಿತಾ ಕಲಾಲ, ಸಂಪನ್ಮೂಲ ವ್ಯಕ್ತಿ ವಿದ್ಯಾ ಮೇತ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ತರಬೇತಿ ಶಿಬಿರದಲ್ಲಿ 35 ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.