ದಾಂಡೇಲಿ:ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಯು ದೇಶ ಸೇವೆ ಮಾಡುತ್ತಿರುವ ಸಂಸ್ಥೆಯಾಗಿದೆ. ಯೋಧರು ದೇಶದ ಗಡಿ ಕಾಯುವ ಮೂಲಕ ದೇಶ ಸೇವೆ ಮಾಡಿದರೆ, ವಿ.ಆರ್.ಡಿ.ಎಂ ಟ್ರಸ್ಟ್ ಹಲವು ಸ್ತರಗಳಲ್ಲಿ ಸೇವಾ ಕೈಂಕರ್ಯಗಳನ್ನು ಮಾಡುವುದರ ಮೂಲಕ ರಾಷ್ಟ್ರಸೇವೆ ಮಾಡುತ್ತಿದೆ ಎಂದು ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಹೇಳಿದರು.
ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ನಿವೃತ್ತ ಸೇನಾನಿಗಳ ಸಮ್ಮಿಲನ ವೀರ ನಮನ- ಸನ್ಮಾನ ಕಾರ್ಯಕ್ರಮವನ್ನು ನಗರದ ಹಳೆದಾಂಡೇಲಿಯ ಹಾರ್ನ್ಬಿಲ್ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗೆಲ್ಲ ಸೈನಿಕರಾಗಿ ದೇಶ ಸೇವೆ ಮಾಡಲು ಅಮೂಲ್ಯ ಅವಕಾಶ ದೊರೆತಿರುವುದು ನಮ್ಮ ಭಾಗ್ಯ ಎಂದ ಅವರು, ನಿವೃತ್ತ ಯೋಧರು ತಮ್ಮ ಬದುಕಿನ ಜೊತೆಗೆ ಸಮಾಜಕ್ಕೆ ಉಪಯುಕ್ತ ಮಾರ್ಗದರ್ಶನ ನೀಡಬೇಕು. ಸೈನಿಕರಾದವರು ನಿವೃತ್ತರಾದ ಬಳಿಕವು ಸರಕಾರದಿಂದ ಅನೇಕ ಸೇವೆಗಳಿವೆ. ಹಾಗೆಂದು ನಮ್ಮ ನಮ್ಮ ಆರೋಗ್ಯದ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದರು. ಸೈನಿಕರ ಬಗ್ಗೆ ಕಳಕಳಿಯನ್ನು ಹೊಂದಿರುವ ವಿ.ಆರ್.ಡಿ.ಎಂ ಟ್ರಸ್ಟಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಒತ್ತಡದ ನಡುವೆಯು ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಆರ್.ವಿ.ದೇಶಪಾಂಡೆಯವರ ಸೇವಾ ಕಾರ್ಯಗಳನ್ನು ಕೊಂಡಾಡಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವಿಷ್ಣು ಉಪ್ಪಾರ ನಿವೃತ್ತ ಸೈನಿಕರ ಸಂಘಕ್ಕೊಂದು ಜಾಗ ಒದಗಿಸಿಕೊಡುವಂತೆ ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಗೂ ವಿ.ಆರ್.ಡಿ.ಎಂ ಟ್ರಸ್ಟಿನ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ದೇಶಸೇವೆ ಮಾಡುವ ಸೈನಿಕರ ಕರ್ತವ್ಯ ಅತ್ಯಂತ ಅಮೋಘವಾಗಿದೆ. ತಮ್ಮೆಲ್ಲ ಸುಖವನ್ನು ಬದಿಗೊತ್ತಿ ದೇಶಸೇವೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಜೀವನದ ಮಹತ್ವದ ಘಟ್ಟದಲ್ಲಿರುವಾಗಲೆ ನಿವೃತ್ತಿಯನ್ನು ಹೊಂದುವ ಸೈನಿಕರ ಹಲವಾರು ಬೇಡಿಕೆಗಳು ನ್ಯಾಯೋಚಿತವಾಗಿದೆ. ದೇಶದ ಗಡಿಯನ್ನು ಕಾಯುವ ಮಹೋನ್ನತ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದ ನಿವೃತ್ತ ಯೋಧರನ್ನು ಗೌರವಿಸಲು ಸಂಸ್ಥೆ ಹೆಮ್ಮೆ ಪಡುತ್ತದೆ ಎಂದು ಹೇಳಿ ನಿವೃತ್ತ ಸೈನಿಕರ ಸಂಘಕ್ಕೆ ಆದ್ಯತೆಯಡಿ ಜಾಗವನ್ನು ನೀಡುವಂತೆ ನಗರಸಭೆಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಹಾಗೂ ಮೃತ ಯೋಧರ ಕುಟುಂಬ ವರ್ಗದವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಶಿರಸಿಯ ಜನನಿ ಸಂಗೀತ ಸಂಸ್ಥೆಯ ಕಲಾವಿದರಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು, ನಗರಸಭೆಯ ಸದಸ್ಯರು, ನಾಗರೀಕರು ಭಾಗವಹಿಸಿದ್ದರು.