ಕಾರವಾರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಇತ್ತೀಚೆಗೆ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿಯನ್ನು ಮುಗಿಸಬೇಕು ಎಂಬ ಈ ಹಿಂದಿನ ಸಭೆಯಲ್ಲಿ ನೀಡಲಾದ ಯಾವುದೇ ನಿರ್ದೇಶನಗಳನ್ನು ಕಂಪನಿಯು ಪಾಲಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭಾರತೀಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಸೋಮವಾರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಭೆಯಲ್ಲಿ ಐಆರ್‍ಬಿ ಅಧಿಕಾರಿಗಳು ಮಳೆಗಾಲ ಪ್ರಾರಂಭಕ್ಕೂ ಮುನ್ನ ಹೆದ್ದಾರಿ ಕಾಮಗಾರಿ ಹಾಗೂ ಫ್ಲೈ ಓವರ್ ಕಾಮಗಾರಿಯನ್ನು ಮುಗಿಸುವುದಾಗಿ ತಿಳಿಸಿದ್ದು, ಈವರೆಗೂ ಕಾರವಾರದ ಫ್ಲೈ ಓವರ್ ಒಂದು ಸೈಡ್ ಕಾಮಗಾರಿ ಕೂಡಾ ಮುಗಿದಿಲ್ಲ. ಟನಲ್ ಕಾಮಗಾರಿ ಕೂಡಾ ನಿಧಾನಗತಿಯಲ್ಲಿದ್ದು, ಮಳೆಗಾಲಕ್ಕೂ ಮುನ್ನ ಸುರಂಗದ ಮೂಲಕ ಸಂಚಾರದ ಸಾಧ್ಯತೆ ಕಾಣುತ್ತಿಲ್ಲ. ಅಲ್ಲದೇ ಈ ಹಿಂದೆ ಪ್ರಕೃತಿ ವಿಕೋಪ ಮುಂಜಾಗೃತೆ ಸಭೆಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವ ಅರಗಾ ಗುಡ್ಡ, ತಂಡ್ರಕುಳಿ, ಹೊಸಪಟ್ಟಣ ಪ್ರದೇಶದಲ್ಲಿ ಸೂಕ್ತ ರಕ್ಷಣಾ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಅದನ್ನು ಕೂಡಾ ಸಮರ್ಪಕವಾಗಿ ಕೈಗೊಂಡಿರುವದು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದಿನ ಸಭೆಯಲ್ಲಿ ಸೂಚಿಸಿದಂತೆ ಮಳೆಗಾದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ, ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗದೇ ಕೃತಕ ಪ್ರವಾಹ ಉಂಟಾಗಬಹುದಾದ ಪ್ರದೇಶಗಳಲ್ಲಿ ಸೂಕ್ತ ರಕ್ಷಣಾ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಗೂ ಅನುಷ್ಠಾನ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಯಾವುದೇ ಅನಾಹುತಗಳು ಸಂಬವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಗೂ ಅನುಷ್ಠಾನ ಕಂಪನಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ಲಿಂಗೇಗೌಡ, ಉಪವಿಭಾಗಾಧಿಕಾರಿಗಳಾದ ರಾಹುಲ್ ಪಾಂಡೆ, ಜಯಲಕ್ಷ್ಮೀ ರಾಯಕೋಡ, ಐಆರ್ ಬಿ ಚೀಫ್ ಜನರಲ್ ಮ್ಯಾನೇಜರ್ ಮೋಹನ್‍ದಾಸ್ ಮತ್ತು ಇತರರು ಪಾಲ್ಗೊಂಡಿದ್ದರು.