ಶಿರಸಿ: ಪರಿಸರಕ್ಕೆ ಪೂರಕವಾಗುವ ಆವಿಷ್ಕಾರಗಳನ್ನು ವಿಜ್ಞಾನಿಗಳು ಮಾಡುವ ಅವಶ್ಯಕತೆ ಇದೆ. ಅನೇಕ ದಶಕಗಳಿಂದಲೂ ವಿಜ್ಞಾನ ಪರಿಸರಕ್ಕೆ ಮಾರಕವೋ, ಪೂರಕವೋ ಎಂಬ ಚರ್ಚೆ ನಡೆಯುತ್ತಿದೆ ಆದರೆ ಉಕ್ರೇನ್ ನಂತ ದೇಶಗಳನ್ನು ನೋಡಿದಾಗ ಮಾರಕ ಎಂದೆನಿಸದೇ ಇರದು. ಆದ್ದರಿಂದ ಪರಿಸರವನ್ನು ಕಾಪಾಡುವ ಅದಕ್ಕೆ ಪೂರಕವಾದ ವೈಜ್ಞಾನಿಕ ಆವಿಷ್ಕಾರ ಅತ್ಯಗತ್ಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಶಾಲ್ಮಲಾ ನದಿ ತಟದ ಸಹಸ್ರ ಲಿಂಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಪರಿಸರ ದಿನದ ಕಾರ್ಯಕ್ರಮದಲ್ಲಿ ನದಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಇಂದು ಪರಿಸರ ಹೇಗೆ ನಾಶವಾಗುತ್ತದೆ ಎಂದು ನೋಡಿದ್ದೇವೆ. ಆದರೆ ಈಗ ಹಿಂದಿ ಗಿಂತಲೂ ಹೆಚ್ಚು ಜನಜಾಗೃತಿ ಉಂಟಾಗಿದೆ. ಕೈಗಾರಿಕೆ ಉದ್ಯೋಗ ದೃಷ್ಟಿಯಿಂದ ಪರಿಸರದ ಮೇಲೆ ದಾಳಿ ಆಗುತ್ತಿದೆ. ಇದನ್ನೆಲ್ಲಾ ತಡೆಗಟ್ಟಿ ಪರಿಸರ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲದೇ ಬೇಡ್ತಿ ಕೊಳ್ಳ ರಕ್ಷಣಾ ಸಮಿತಿ ತೆಗೆದುಕೊಳ್ಳುವ ನಿರ್ಣಯವನ್ನು ಸರ್ಕಾರ ಮಟ್ಟದಲ್ಲಿ ಅನುಷ್ಠಾನ ಮಾಡಲು ಬದ್ಧನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನಾವು ನಿರಂತರವಾಗಿ ಪರಿಸರದ ಜನಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು, ಬೇಡ್ತಿ ಸಂರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಜನರು ಈ ಹಿಂದಿನ ಹಲವು ಯೋಜನೆಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ. ನಿಸರ್ಗ ಸಂಪತ್ತಿನ ರಕ್ಷಣೆಗೆ ನಡೆಸಿದ ಹೋರಾಟಗಳು ಗೆಲುವು ಕಂಡಿವೆ. ಆದ್ದರಿಂದ ಈ ಪರಿಸರದ ದಿನವಾಗಿ ಬೇಡ್ತಿ ಆಂದೋಲನಕ್ಕೆ ಇಂದು ಚಾಲನೆ ನೀಡಿದ್ದೇವೆ. ನದೀ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಬೇಕು ಎಂದರು.
ಪತ್ರಕರ್ತ ನಾಗೇಶ ಹೆಗಡೆ ಮಾತನಾಡಿ, ಮುಂದಿನ ಪೀಳಿಗೆಗೆ ತಪ್ಪುಗಳನ್ನು ತಿಳಿಸಬೇಕಿದೆ. ನದಿಯ ಹರಿವಿಗೆ ಅಡ್ಡಿಪಡಿಸಬಾರದು.
ಅಘನಾಶಿನಿ, ಬೇಡ್ತಿ ಈ ನಾಡಿನ ಪವಿತ್ರ ಜೋಡಿ ನದಿಗಳು. ಇವೆರಡೂ ನದಿಗಳಿಗೂ ಮಾನವ ಹಕ್ಕು ನಿಯಮ ಘೋಷಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಮೃಗ-ಪಕ್ಷಿಗಳನ್ನು ಉಳಿಸಿ ಮಾದರಿ ಪೂರ್ವಜರಾಗಬೇಕು ಎಂದರು.
ಎಂದರು. ಈ ಸಂದರ್ಭದಲ್ಲಿ ಸಹಸ್ರ ಲಿಂಗಕ್ಕೆ ಪೂಜೆ ಸಲ್ಲಿಸಿದ ಕಾಗೇರಿ, ನದಿಗೆ ಪೂಜೆ ಸಲ್ಲಿಸಿದರು. ಸಭೆಯ ನಂತರದಲ್ಲಿ ಬೇಡ್ತಿ ಉಳಿಸಿ ಹೋರಾಟದ ಬೃಹತ್ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿದರು.