ಕುಮಟಾ: ಅಘನಾಶಿನಿ ಗ್ರಾಮದ ಹರಿಕಾಂತ ಸಮುದಾಯದ ಕರಿದೇವ ದೇವಸ್ಥಾನದ ಎದುರು ನೂರಾರು ದೋಣಿಗಳನ್ನು ನಿಲ್ಲಿಸಲು ಧಕ್ಕೆಯ ವ್ಯವಸ್ಥೆ ಕಲ್ಪಿಸಬೇಕೆಂದು ಈ ಭಾಗದ ಮೀನುಗಾರರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಸ್ಥಳವು ನದಿಯ ನೀರು ಏರಿಳಿತದಲ್ಲೂ ಒಂದೇ ಸಮತಟ್ಟಾಗಿರುತ್ತದೆ. ನದಿಯ ಇಳಿತ ಹಾಗೂ ಉಬ್ಬರ ಎರಡೂ ಸ್ಥಿತಿಯಲ್ಲೂ ದೋಣಿ ಹಾಗೂ ಬೋಟ್ ಓಡಾಡಲು ಅವಶ್ಯವಿರುವಷ್ಟು ನೀರಿನ ಮಟ್ಟ ಸದಾಕಾಲ ಇರುವುದರಿಂದ ಈ ಪ್ರದೇಶದಲ್ಲಿ ತುಂಬಾ ಮೀನುಗಾರಿಕಾ ದೋಣಿಗಳು ಲಂಗರು ಹಾಕುವುದಾಗಲಿ, ಲಂಗರು ಮೀನುಗಾರಿಕೆಗೆ ಸಂಬಂಧಪಟ್ಟ ಸಾಮಾನು ಸರಂಜಾಮುಗಳನ್ನು ಏರಿಳಿಸಲಿಕ್ಕಾಗಲಿ ಇದು ಯೋಗ್ಯ ಸ್ಥಳವಾಗಿದೆ. ಹಾಗಾಗಿ ಇಲ್ಲಿ ಸುಸಜ್ಜಿತವಾದ ಧಕ್ಕೆ ಅತೀ ಅವಶ್ಯವಿದ್ದು, ಹಲವಾರು ವರ್ಷಗಳಿಂದ ಮೀನುಗಾರಿಕಾ ಇಲಾಖೆಗೆ ಗಮನಕ್ಕೆ ತರುತ್ತಿದ್ದರೂ ಇದುವರೆಗೂ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಸ್ಥಳೀಯ ಮೀನುಗಾರಿಕಾ ಚಟುವಟಿಕೆಗೆ ತುಂಬಾ ಅನಾನುಕೂಲತೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದಕ್ಕೆ ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ನೀತಿಸಂಹಿತೆ ಮುಗಿದ ಬಳಿಕ ಈ ನಿಟ್ಟಿನಲ್ಲಿ ಪ್ರಯತ್ನ ವಹಿಸಿ ಅತ್ಯಂತ ಮುತುವರ್ಜಿಯಿಂದ ಮೀನುಗಾರರ ಹಿತದೃಷ್ಟಿಗಾಗಿ ಧಕ್ಕೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಮೋಹನ ಲಕ್ಕುಮನೆ, ಈಶ್ವರ ಹರಿಕಂತ್ರ, ಜಟ್ಟಪ್ಪ ಹರಿಕಂತ್ರ, ದೇವಿದಾಸ ಹರಿಕಂತ್ರ, ಗೋಪಾಲ ಹರಿಕಂತ್ರ ಮುಂತಾದವರು ಇದ್ದರು.