ಕುಮಟಾ: ಇಲ್ಲಿನ ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಹೈಸ್ಕೂಲ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೀತಿ ಭಂಡಾರಕರ ಮಾತನಾಡಿ, 1908ರಲ್ಲಿ ಸ್ಥಾಪಿತ ಕುಮಟಾದ ಹಳೆಯ ಶಿಕ್ಷಣ ಸಂಸ್ಥೆಯಾಗಿ ಅನೇಕ ಜನರಿಗೆ ಶಿಕ್ಷಣವನ್ನು ನೀಡಿ, ಉತ್ತಮ ಜೀವನ ನಡೆಸಲು ಕಾರಣವಾದ ಸಂಸ್ಥೆಯಾಗಿದೆ. 1959ರಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನೆರವೇರಿತು. ಸುವರ್ಣ ಮಹೋತ್ಸವದ ಅಂಗವಾಗಿ ರಾಜೇಂದ್ರ ಪ್ರಸಾದರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಲಾಗಿದೆ. 2009ರಲ್ಲಿ ಶತಮಾನೋತ್ಸವ ಆಚರಣೆ ಮಾಡಲಾಯಿತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೋಹನ ಶಾನಭಾಗ ಮಾತನಾಡಿ, ವಿದ್ಯಾರ್ಥಿಗಳಿಗೆ ನಿಜವಾದ ಕಲಿಕೆ ಹಾಗೂ ಶಿಕ್ಷಣವೂ ಪ್ರಾರಂಭವಾಗುವುದು ಪ್ರೌಢಶಾಲೆಯ ಹಂತದಲ್ಲಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ನಮ್ಮ ಜೀವನ ರೂಪಿಸಿಕೊಳ್ಳಲು ಇದು ಮಹತ್ವದ ಘಟ್ಟವಾಗಿದೆ. ಈ ಅವಧಿಯಲ್ಲಿ ವಿಧ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಈ ಬಗ್ಗೆ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಇದರಿಂದ ಶಿಕ್ಷಣದ ಗುಣಮಟ್ಟವೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಮುರಳಿಧರ ಪ್ರಭು, ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್.ಪ್ರಭು, ವಿ.ಎ.ಶಾನಭಾಗ, ಕೃಷ್ಣದಾಸ್ ಪೈ, ಶಾಲೆಯ ಮುಖ್ಯಾಧಪಕ ಡಿ.ಜಿ.ಶಾಸ್ತ್ರಿ, ಶಿಕ್ಷಕ ಉಮೇಶ ಭಟ್, ವಿಜಯಕುಮಾರ ನಾಯ್ಕ, ನಿವೃತ್ತ ಶಿಕ್ಷಕ ಎನ್.ಆರ್.ಗಜು ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.