ಕಾರವಾರ: ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ದಿನದಿಂದ ಒಂದು ವಾರಗಳ (ಜೂ.12) ಕಾಲ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆಯಿಂದ ಬೀಜ ಬಿತ್ತೋತ್ಸವ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೀಜಗಳನ್ನು ಬಿತ್ತುವ ಮೂಲಕ ಗಿಡಗಳನ್ನು ಬೆಳೆಸಿ ಪರಿಸರ ಉಳಿಸುವ ಕಾಯಕದಲ್ಲಿ ಕೈಜೋಡಿಸಬೇಕೆಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಕರ್ನಾಟಕ ಅರಣ್ಯ ಇಲಾಖೆಯು ‘ಬೀಜ ಬಿತ್ತೋತ್ಸವ’ ವಿಶೇಷ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ಆಯೋಜಿಸಿದೆ. ರಾಜ್ಯದ 50 ವಿಭಾಗಗಳ 228 ವಲಯಗಳಲ್ಲೂ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಜಾತಿಯ ಬೀಜಗಳನ್ನು ಸಂಗ್ರಹಿಸಲಾಗಿದ್ದು, ಇವುಗಳನ್ನು ನಿಗದಿತ ಪ್ರದೇಶಗಳಲ್ಲಿ ಬಿತ್ತುವ ಮೂಲಕ ಗಿಡಗಳನ್ನ ಬೆಳೆಸಿ ಅರಣ್ಯ ಉಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವಿರುವ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲು ಯೋಚಿಸಿದ್ದೇವೆ. ಹಳಿಯಾಳ ವಿಭಾಗದಲ್ಲಿ 50, ಹೊನ್ನಾವರದಲ್ಲಿ 70, ಶಿರಸಿ- ಕಾರವಾರದಲ್ಲಿ ತಲಾ 80, ಯಲ್ಲಾಪುರದಲ್ಲಿ 100 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಟ್ಟಿ ಮಾಡಿಕೊಂಡಿದ್ದು, ಜಿಲ್ಲೆಯಾದ್ಯಂತ ಸುಮಾರು 400 ಕಾರ್ಯಕ್ರಮಗಳಲ್ಲಿ 4 ಸಾವಿರ ಕೆಜಿ ಬೀಜಗಳನ್ನು ಬಿತ್ತುವ ಗುರಿ ಹಾಕಿಕೊಳ್ಳಲಾಗಿದೆ. ಕಾರವಾರ ವಿಭಾಗವೊಂದರಲ್ಲೇ 80 ಕಾರ್ಯಕ್ರಮಗಳಲ್ಲಿ 800 ಕೆಜಿ ಬೀಗಳನ್ನು ಬಿತ್ತಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಹಾಜರಿದ್ದರು.