ಹೊನ್ನಾವರ: ಗ್ರಾಮೀಣ ಭಾಗದ ವಿದ್ಯಾರ್ಥಿಯೊರ್ವರು ತುಂಬಾ ಕಷ್ಟಪಟ್ಟು ಈ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಹೆಮ್ಮೆ ಪಡಬೇಕಿದೆ. ಇಂತಹ ವಿದ್ಯಾರ್ಥಿಯನ್ನು ಸನ್ಮಾನಿಸುವ ಗೌರವ ದೊರಕಿರುವುದು ಸುಯೋಗ ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್.ಹೇಳಿದರು.
ಅವರು ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 311ನೇ ರ‍್ಯಾಂಕ್ ಪಡೆದ ತಾಲೂಕಿನ ಚಿತ್ತಾರ ಗ್ರಾಮದ ದೀಪಕ್ ಶೇಟ್ ಅವರಿಗೆ ಚಿತ್ತಾರ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮಸ್ಥರು ನಡೆಸಿದ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಅಧ್ಯಕ್ಷತೆ ವಹಿಸಿದ್ದ ತಹಶಿಲ್ದಾರ ನಾಗರಾಜ ನಾಯ್ಕಡ ಮಾತನಾಡಿ, ದೀಪಕ್ ಶೇಟ್‌ರವರು ಪುಟ್ಟ ಗ್ರಾಮದಲ್ಲಿ ಜನಿಸಿ ಬಡತನದ ನಡುವೆಯು ಛಲಬಿಡದೆ ಭಗೀರಥ ಪ್ರಯತ್ನಮಾಡಿ ಸಾಧನೆ ಮಾಡಿದ್ದಾರೆ ಎಂದರು.
ಗ್ರಾಮಸ್ಥರು, ಸ್ಥಳೀಯ ಸಂಘ- ಸಂಸ್ಥೆಯವರು, ರಿಕ್ಷಾ ಚಾಲಕರ ಸಂಘ, ತಾಲೂಕಾಡಳಿತ, ಗ್ರಾಮ ಪಂಚಾಯತ ಚಿತ್ತಾರ, ಶಿಕ್ಷಕರ ಸಂಘ, ಸೇರಿದಂತೆ ಹಲವರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಚಿತ್ತಾರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತರಾದ ಅನಿತಾ ವಜ್ರ ಮತ್ತು ಎನ್.ಎಸ್.ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಿದರು.
ತಾಲೂಕಾ ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ ನಾಯ್ಕ, ಮಂಕಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜಯ್ ಭಂಡಾರಕರ, ಚಿತ್ತಾರ ಗ್ರಾ.ಪಂ. ಪಿಡಿಓ ರಾಧಾಕೃಷ್ಣ ನಾಯ್ಕ, ವಲಯ ಸಂರಕ್ಷಣಾಧಿಕಾರಿ ಸವಿತಾ ದೇವಾಡಿಗ, ಗ್ರಾಮಸ್ಥರಾದ ಗಣಪತಿ ಕೋಡಿಯಾ, ಜಿ ಆರ್ ಗೌಡ, ಎಮ್.ಜಿ.ನಾಯ್ಕ ಮತ್ತಿತರರು ಅಭಿನಂದಿಸಿದರು. ವೇದಿಕೆಯಲ್ಲಿ ಶಿಕ್ಷಕರಾದ ರಾಧಾ ಪಟಗಾರ, ದೀಪಕ್ ನಾಯ್ಕ, ರಾಮಚಂದ್ರ ಶೇಟ್, ಸೀತಾ ಶೇಟ್ ಮತ್ತಿತರರು ಇದ್ದರು.