ಯಲ್ಲಾಪುರ: ಉಪ ಅರಣ್ಯ ವಿಭಾಗದಲ್ಲಿ 2022ನೇ ಮಳೆಗಾಲದ ಬೀಜ ಬಿತ್ತನೆ ಅಭಿಯಾನ ಜೂನ್ 5ರಿಂದ 12 ರವರೆಗೆ ನಡೆಯಲಿದೆ. ಒಟ್ಟು 7 ಲಕ್ಷಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು ಅದರಲ್ಲಿ ರೈತರಿಗೆ ವಿತರಿಸಲು 59 ಸಾವಿರ ಸಸಿಗಳನ್ನು ಕಾದಿರಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಎಚ್.ಎ. ತಿಳಿಸಿದರು.
ಶನಿವಾರ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಅರಣ್ಯ ಇಲಾಖೆಯ ಆರ್‌ಎಸ್‌ಪಿಡಿ ಯೋಜನೆಯಲ್ಲಿ ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟ ಮಾಡಲಾಗುತ್ತದೆ. ಸಸಿಗೆ 3 ರೂ. ಹಾಗೂ 1 ರೂ.ನಂತೆ ವಿತರಣೆ ಮಾಡಲಾಗುತ್ತದೆ. ಈ ಸಾಲಿನಲ್ಲಿ 59000 ಸಸಿಗಳನ್ನು ಬೆಳೆಸಲು ಗುರಿ ನಿಗದಿಪಡಿಸಿದ್ದು, ಸಸಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕೆಎಪಿವೈ ಯೋಜನೆಯಡಿ ಪ್ರಸ್ತುತ ಸಾಲಿನ ಬಾಕಿ ಮೊತ್ತ 13.9525 ರೂ. 194 ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕಾಗಿದೆ. ಈ ಯೋಜನೆಯಡಿ ಸಸಿಗಳನ್ನು ಹಚ್ಚಿದ ರೈತರಿಗೆ ಮೂರನೇ ವರ್ಷ 50 ರೂ.ನಂತೆ ಒಟ್ಟು 125 ರೂ.ಗಳನ್ನು ನೀಡಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಡಿ ಸರ್ಕಾರದ ಆದೇಶದಂತೆ ಬೀಜ ಬಿತ್ತನೆ ಅಭಿಯಾನದಲ್ಲಿ ಜೂನ್ 5ರಿಂದ 12ರವರೆಗೆ ವಿಭಾಗದ ವಿವಿಧೆಡೆ ಸ್ಥಳೀಯ ಜಾತಿಯ ಬೀಜಗಳನ್ನು ಬಿತ್ತನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಬೀಜ ಬಿತ್ತುವ ಹಾಗೂ ಸಸಿ ನೆಡುವ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು, ಎನ್‌ಸಿಸಿ ಎಸ್‌ಎಸ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು, ಸ್ಥಳೀಯ ಸಂಘ ಸಂಸ್ಥೆಗಳು ಭಾಗವಹಿಸಿ. ವನೀಕರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅರಣ್ಯ ಇಲಾಖೆಯೊಂದಿಗೆ ತನ್ಮೂಲಕ ನಿಮ್ಮ ಊರಿನ ಅರಣ್ಯ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಸಹಕರಿಸಲು ಅವರು ಮಾದ್ಯಮದ ಮೂಲಕ ಕೋರಿದ್ದಾರೆ.
ಮಂಚಿಕೇರಿ ಎಸಿಎಫ್ ಹಿಮವತಿ ಭಟ್ಟ, ವಲಯ ಅರಣ್ಯ ಅಧಿಕಾರಿ ಬಾಲಸುಬ್ರಹ್ಮಣ್ಯಂ ಎಂ., ಕಿರವತ್ತಿ ವಲಯ ಅರಣ್ಯಾಧಿಕಾರಿ ನದಾಫ್ ಎನ್.ಎಲ್., ಇಡಗುಂದಿ ವಲಯ ಅರಣ್ಯಾಧಿಕಾರಿ ಪ್ರಸಾದ ಪೆಡ್ನೇಕರ, ಮಂಚಿಕೇರಿ ವಲಯ ಅರಣ್ಯಾಧಿಕಾರಿ ಅಮೀತ ಚೌಹಾನ್ ಇನ್ನಿತರ ಅಧಿಕಾರಿಗಳು ಇದ್ದರು.
ಕೋಟ್…
ಯಲ್ಲಾಪುರ ವಲಯದ ಯರಕನಬೈಲ್ ನರ್ಸರಿಯಲ್ಲಿ 23750, ಸಬಗೇರಿ ನರ್ಸರಿಯಲ್ಲಿ 92700, ಕಿರವತ್ತಿ ವಲಯ ಬಸಳೆಬೈಲ ನರ್ಸರಿಯಲ್ಲಿ 122470, ಮಂಚಿಕೇರಿ ವಲಯ ಕುರಿಕೊಪ್ಪ ನರ್ಸರಿಯಲ್ಲಿ 41494, ಭರಣಿ ನರ್ಸರಿಯಲ್ಲಿ 75000, ಇಡಗುಂದಿ ವಲಯ ಚಿನ್ನಾಪುರ ನರ್ಸರಿಯಲ್ಲಿ 66,181, ಬಾರೆ ನರ್ಸರಿಯಲ್ಲಿ 34,840, ಮುಂಡಗೋಡ ಕಾಳಗನಕೊಪ್ಪ ನರ್ಸರಿಯಲ್ಲಿ 1,32,726, ಕಾತೂರು ಓರಲಗಿ ನರ್ಸರಿಯಲ್ಲಿ 1,11,044 ಸಸಿಗಳನ್ನು ಬೆಳೆಸಲಾಗುತ್ತಿದೆ.–· ಹಿಮವತಿ ಭಟ್ಟ, ಮಂಚಿಕೇರಿ ಎಸಿಎಫ್