ಕಾರವಾರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ನಿವೃತ್ತ ಉಪನಿರ್ದೇಶಕ ಹರೀಶ ಗಾಂವಕರವರಿಗೆ ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಹರೀಶ ಗಾಂವಕರವರು ಶಿಕ್ಷಣ ಇಲಾಖೆಯ ದೈತ್ಯ ಶಕ್ತಿಯಾಗಿದ್ದರು. ಅವರ ಅವಧಿಯಲ್ಲಿ ಇಲಾಖೆಯು ಬಹಳಷ್ಟು ಪ್ರಗತಿಯನ್ನು ಸಾಧಿಸಿದೆ. ಅಮೂಲಾಗ್ರ ಬದಲಾವಣೆಯ ಹರಿಕಾರರಾಗಿದ್ದಾರೆ ಎಂದರು.
ಜಿಲ್ಲಾ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಮಾತನಾಡಿ, ಹರೀಶ ಅವರು ಶಿಕ್ಷಣ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿರುವುದನ್ನು ಕಂಡಿದ್ದೇವೆ ಎಂದರು. ಕಾರವಾರ ಕಸಾಪದ ಅಧ್ಯಕ್ಷ ರಾಮಾ ನಾಯ್ಕ, ನಮ್ಮೂರಿನವರು ಎಂಬುವ ಅಭಿಮಾನದ ಜೊತೆಗೆ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲಾಖೆಯನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಿರುವದು ಸದಾ ಸ್ಮರಣೀಯ ಎಂದರು.
ಗೌರವ ಸ್ವಿಕರಿಸಿ ಮಾತನಾಡಿದ ನಿವೃತ್ತ ಉಪನಿರ್ದೇಶಕ ಹರೀಶ ಗಾಂವಕರ, ತಮ್ಮ ಪ್ರೀತಿ, ಅಭಿಮಾನಕ್ಕೆ ಋಣಿಯಾಗಿರುವೆ. ನನಗೆ ನೀಡಿದ ಸಹಕಾರವನ್ನು ಮುಂದೆಯೂ ನೀಡಿರಿ ಎಂದೂ ಹೇಳುತ್ತಾ ಕೃತಜ್ಞತೆ ಅರ್ಪಿಸಿದರು.
ಕಸಾಪ ಕಾರ್ಯದರ್ಶಿ ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಸಾಪದ ಯಮುನಾ ಗಾಂವಕರ, ಖೈರುನ್ನಿಸಾ ಶೇಖ್, ಜಿ.ಡಿ.ಪಾಲೇಕರ, ರಮೇಶ ಗುನಗಿ, ಮಾರುತಿ ಬಾಡಕರ, ಅಲ್ತಾಫ್ ಶೇಖ್, ಮಚ್ಚೇಂದ್ರ ಮಹಾಲೆ, ಮಹಾದೇವ ರಾಣೆ, ಮೋಹನ ಕಿಂದಳಕರ ಉಪಸ್ಥಿತರಿದ್ದರು.