ಯಲ್ಲಾಪುರ:ವಿಜ್ಞಾನದಲ್ಲಿ ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ 1986ರಲ್ಲಿ ಜನಿಸಿ, 2003ರಲ್ಲಿ ಥಲಸ್ಸೀಮಿಯಾ ಕಾಯಿಲೆಯಿಂದ ಅಕಾಲಿಕ ಮರಣ ಹೊಂದಿದ ಸಪ್ತರ್ಷಿ ಎಂಬ ಬಾಲಕನ ಸ್ಮರಣಾರ್ಥ ಆತನ ಪಾಲಕರು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗಾಗಿ ಶಾಲೆಗಳಿಗೆ ವಿಜ್ಞಾನ ಪುಸ್ತಕ ನೀಡಿ, ಆ ಮಕ್ಕಳಲ್ಲಿ ತಮ್ಮ ಮಗನನ್ನು ನೋಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ರವೀಂದ್ರನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪಶ್ಚಿಮ ಬಂಗಾಳದ ಸಪ್ತರ್ಷಿ ವಿವೇಕಾನಂದ ಸೊಸೈಟಿ ವತಿಯಿಂದ 5 ಸಾವಿರ ರೂ. ವೆಚ್ಚದ ವಿಜ್ಞಾನ ಪುಸ್ತಕಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಪ್ತರ್ಷಿ ವಿವೇಕಾನಂದ ಸೊಸೈಟಿಯ ಪರವಾಗಿ ರಾಷ್ಟ್ರೀಯ ಕ್ರೀಡಾಪಟು, ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ.ತಾಂಡುರಾಯನ್ ಮಾತನಾಡಿ, ಈ ಹಿಂದೆ ಎರಡು ಶಾಲೆಗಳಿಗೆ ಪುಸ್ತಕವನ್ನು ವಿತರಿಸಲಾಗಿದೆ. ಹಿಂದುಳಿದ ವರ್ಗದವರೇ ಹೆಚ್ಚಿರುವ ರವೀಂದ್ರನಗರದಂತಹ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ, ಅವರು ಕೂಡ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪುಸ್ತಕ ನೀಡಲಾಗಿದೆ. ಪುಸ್ತಕ ಓದಿದ ವಿದ್ಯಾರ್ಥಿಗಳು ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಂಡು ಉತ್ತಮ ನಾಗರಿಕರಾಗಿ ಎಂದು ಕರೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ನಾಯಕ ಮಾತನಾಡಿ, ಮಕ್ಕಳ ಆಸಕ್ತಿಗೆ ಅನುಗುಣವಾದ ಪುಸ್ತಕಗಳು ಎಲ್ಲಾ ಶಾಲೆಯ ಗ್ರಂಥಾಲಯದಲ್ಲಿ ಇರಬೇಕು. ಸಪ್ತರ್ಷಿ ವಿವೇಕಾನಂದ ಸೊಸೈಟಿಯವರು ಇಂತಹ ಪುಸ್ತಕಗಳನ್ನು ನೀಡಿ ನಮ್ಮ ಶಾಲೆಯ ಗ್ರಂಥಾಲಯವನ್ನು ಶ್ರೀಮಂತಗೊಳಿಸಿದ್ದಾರೆ. ಆಸಕ್ತಿಯಿಂದ ಮಕ್ಕಳಿಗೆ ವರ್ಗಾಯಿಸುವ ಕೆಲಸವನ್ನು ಮಾಡುತ್ತೇವೆ. ನಮ್ಮ ಶಾಲೆಯ ಮಕ್ಕಳು ವಿಜ್ಞಾನದತ್ತ ಆಸಕ್ತಿವಹಿಸುವಂತೆ ವಿವೇಕಾನಂದರ ಸೊಸೈಟಿ ಪ್ರೇರಣೆ ನೀಡಿದೆ ಎಂದು ಹೇಳಿದರು.
ಶಾಲೆಯ ಶಿಕ್ಷಕಿಯರಾದ ಸಂಧ್ಯಾ ಶೆಟ್ಟಿ, ಸಂಧ್ಯಾ ಭಟ್, ಚಂದ್ರಹಾಸ ನಾಯ್ಕ ಹಾಗೂ ವಿದ್ಯಾರ್ಥಿ ಪಾಲಕ- ಪೋಷಕರು ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.