ಶಿರಸಿ:ಪಡಿತರ ವಿತರಣೆಯ ಜೊತೆಯಲ್ಲಿ ಕೇವಲ ಅಕ್ಕಿ ಒಂದೇ ಸರ್ಕಾರ ವಿತರಣೆ ಮಾಡುತ್ತಿದೆ. ಇದರ ಜೊತೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನುಳಿದ ಪ್ರಮುಖ ನಿತ್ಯ ಉಪಯೋಗಿಸುವ ವಸ್ತುಗಳಾದಂತಹ ತೊಗರಿ ಬೇಳೆ, ಉದ್ದಿನ ಬೇಳೆ, ಮೆಣಸು, ಸಾಬೂನು, ಎಣ್ಣೆ ಪ್ಯಾಕೆಟ್ ಕೂಡ ಸರ್ಕಾರದ ಮುಖಾಂತರ ನ್ಯಾಯಬೆಲೆ ಅಂಗಡಿಯಲ್ಲಿ ಎಮ್ಆರ್ಪಿ ದರದಲ್ಲಿ ಮಾರಾಟ ಮಾಡಿದರೆ ರಾಜ್ಯಾದ್ಯಂತ ನ್ಯಾಯಯುತ ಬೆಲೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ನ್ಯಾಯಬೆಲೆ ಅಂಗಡಿಯಲ್ಲಿ ಖರೀದಿಸಲು ಅವಕಾಶ ಸಿಗುತ್ತದೆ. ಸರ್ಕಾರ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಅಕ್ಕಿ ವಿತರಣೆ ಮಾಡಬೇಕು ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ನಗರದ ಹೋಟೆಲ್ ಸಾಮ್ರಾಟ್ನ ವಿನಾಯಕ ಹಾಲ್ನಲ್ಲಿ ಶನಿವಾರ ನಡೆದ ಉತ್ತರ ಕನ್ನಡ ಜಿಲ್ಲಾ ಪಡಿತರದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಅಂಗಡಿಕಾರರು ತಮ್ಮ ಸದಸ್ಯತ್ವ ನೋಂದಾಯಿಸಿ ಸಂಘಟನೆ ಭದ್ರಪಡಿಸುವುದರ ಮುಖಾಂತರ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪಡಿತರ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಕೇಶವ ಗೌಡ, ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ಜಿಲ್ಲಾ ಅಧ್ಯಕ್ಷ ನಜೀರ್ ಎಮ್.ಮೂಡಿ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.