ಕಾರವಾರ:ಶಿಕ್ಷಕರ ಜೊತೆಗೆ ಚಿಕ್ಕ ಚಿಕ್ಕ ಮಕ್ಕಳೂ ಸಹ ತಮ್ಮ ಬಾಲ್ಯವನ್ನು ಕಳೆಯಲು ಶಾಲೆಗೆ ಬಂದಿರುತ್ತಾರೆ. ವಿದ್ಯಾರ್ಥಿಗಳ ಜೊತೆಗಿನ ಸ್ನೇಹ ಶಿಕ್ಷಕರಲ್ಲಿ ಸದಾ ಇರಬೇಕು, ಮಮತೆಯಿಂದ ಪಾಠ ಮಾಡಬೇಕು ಎಂದು ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಜಿ.ಪಿ.ಕಾಮತ್ ಹೇಳಿದರು.
ನಗರದ ಬಾಲಮಂದಿರ ಪ್ರೌಢಶಾಲೆಯ ಸಭಾಭವನದಲ್ಲಿ ಶಿಕ್ಷಕರ ಜೊತೆಗಿನ ಮೊದಲನೇ ಜಂಟಿ ಸಭೆಯು ಯಶಸ್ವಿಯಾಗಿ ನೆರವೇರಿತು.
ಈ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಮತ್ ಅವರು ಮಾತನಾಡಿ, ಮತೀಯ ಭಾವನೆಯನ್ನು ಮಕ್ಕಳ ತಲೆಯಿಂದ ಬಾಲ್ಯದಲ್ಲಿಯೇ ಹೋಗಲಾಡಿಸಿ, ರಾಷ್ಟ್ರಾಭಿಮಾನವನ್ನು ಬೆಳೆಸಬೇಕು. ಪರಿಸರ ರಕ್ಷಣೆ, ನಿರ್ಗತಿಕರಿಗೆ ಸಹಾಯ, ರಕ್ತದಾನದಂತಹ ಸೇವಾ ಮನೋಭಾವನೆಗೆ ಪ್ರೆರೇಪಣೆ ನೀಡಬೇಕು. ಬದಲಾವಣೆಯೊಂದಿಗೆ ನಾವೂ ಸಹ ಬದಲಾಗಬೇಕಾಗಿದೆ ಎಂದು ನುಡಿದರು.
ಹಿಂದೂ ಹೈಸ್ಕೂಲಿನ ಮುಖ್ಯಾಧ್ಯಾಪಕ ಅರುಣ ರಾಣೆ ಮಾತನಾಡಿ, ಶಿಕ್ಷಕರು ಮುಂದಿನ ತಲೆಮಾರಿನವರೂ ಸಹ ನೆನಪಿಸಿಕೊಳ್ಳುವಂತಹ ವ್ಯಕ್ತಿತ್ವವನ್ನು ಹೊಂದಿರಬೇಕು ಎಂದು ನುಡಿದರು.
ವೇದಿಕೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ, ಸುಮತಿದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜಿ.ಎನ್.ಬಂಟ ಉಪಸ್ಥಿತರಿದ್ದರು. ಎಲ್ಲಾ ಶಿಕ್ಷಕ- ಶಿಕ್ಷಕಿಯರು, ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.