ಶಿರಸಿ: ಸರಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗಬೇಕಿದ್ದ ಕಳೆದ ಸಹಕಾರಿ ವರ್ಷದ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳ ಹಾಲು ಉತ್ಪಾದಕರಿಗೆ ನೀಡಲಾಗುವ ರೂ.5 ಪ್ರೋತ್ಸಾಹಧನವು ಆಧಾರ್ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ಜೂ.2ರಂದು ಜಮಾ ಆಗಿದೆ ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.
ಏಪ್ರಿಲ್ ತಿಂಗಳವರೆಗಿನ ಪ್ರೋತ್ಸಾಹಧನದ ಮಾಹಿತಿಯನ್ನು ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಮೇ ತಿಂಗಳ ರೂ.5 ಪ್ರೋತ್ಸಾಹಧನದ ಮಾಹಿತಿಯನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಂದ ಪಡೆಯಲಾಗುತ್ತಿದ್ದು, ಶೀಘ್ರದಲ್ಲಿಯೇ ಮೇ-2022 ನೇ ಮಾಹೆಯ ರೂ. 5 ಪ್ರೋತ್ಸಾಹಧನದ ಮಾಹಿತಿಯನ್ನು ಕ್ಷೀರಸಿರಿ ತಂತ್ರಾಶದಲ್ಲಿ ಅಳವಡಿಸಲಾಗುವುದು ಎಂದರು. ಏಪ್ರಿಲ್ ತಿಂಗಳ ಪ್ರೋತ್ಸಾಹಧನವು ಕೂಡ ಶೀಘ್ರದಲ್ಲೇ ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಪ್ರೋತ್ಸಾಹಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.