ಶಿರಸಿ: ಇತ್ತೀಚಿಗೆ ಯಕ್ಷಾರಾಧಕ ರಘುಪತಿ ನಾಯ್ಕ ಹೆಗ್ಗರಣಿ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶಿವಭಕ್ತ ವೀರಮಣಿ ತಾಳಮದ್ದಲೆ ಮತ್ತು ಸಭಾ ಕಾರ್ಯಕ್ರಮ ಸಂಪನ್ನಗೊಂಡು ಕಲಾಸಕ್ತರಿಗೆ ರಸದೌತಣ ನೀಡಿತು.
ಭಾಗವತ ಎಂ.ಪಿ.ಹೆಗಡೆ ಉಲ್ಲಾಳಗದ್ದೆ, ಮದ್ದಲೆ ವಾದಕ ಚಂದ್ರಶೇಖರ ಹೆಗಡೆ ಕಲ್ಲಳ್ಲಿ, ಶುಶ್ರಾವ್ಯ ಹಿಮ್ಮೆಳ ವೈಭವ ಪ್ರದರ್ಶಿಸಿ ಆಖ್ಯಾನದ ಯಶಸ್ಸಿಗೆ ಮುನ್ನುಡಿಯಾದರು. ಶತ್ರುಘ್ನನಾಗಿ ಜಿ.ಎಮ್.ಭಟ್ಟ ವಾಜಗಾರ, ರಾಮಾಶ್ವಮೇಧದ ಹಿನ್ನಲೆ ತಿಳಿಸುತ್ತಾ ಚತುರನಾದ ಹನುಮನನ್ನು ಸಂಧಾನಕ್ಕೆ ಕಳುಹಿಸಿದರು. ಆರ್.ಟಿ.ಭಟ್ಟ ಕಬ್ಗಾಲ ಹನುಮಂತನಾಗಿ, ಎಂ.ಟಿ.ಗೌಡರ ವೀರಮಣಿ ಜೊತೆಗೆ ಸಂಧಾನದ ಪ್ರಸ್ತಾಪ ಮಾಡಿ ಅದು ವಿಫಲವಾದಾಗ ಯುದ್ಧ ಘಟಿಸಿತು. ಪುಷ್ಕರನಾಗಿ ಈಶ್ವರ ಗೌಡ ಸಾಥ ನೀಡಿದರು.
ವೀರಮಣಿ ತನ್ನ ಮಕ್ಕಳೊಂದಿಗೆ ಮೃತನಾದಾಗ ಈಶ್ವರನ ಪ್ರವೇಶ: ಜನಪ್ರಿಯ ಅರ್ಥಧಾರಿ ಡಾ.ಜಿ.ಎ.ಹೆಗಡೆ ಸೋಂದಾ ಈಶ್ವರನಾಗಿ ಪ್ರವೇಶಿಸಿ ‘ಭೂಲೋಕದಲ್ಲಿ ಅಳಿಯನೇ ದೇವರು ಜ್ಯೋತಿರ್ಮೇಧಪುರದಲ್ಲಿ ಪುರಹರನೇ ಪುರ ರಕ್ಷಕನು’ ಎಂಬ ಆಕರ್ಷಕ ಪೀಠಿಕೆಯೊಂದಿಗೆ ಶತ್ರುಘ್ನನಲ್ಲಿ ಸಂಭಾಷಿಸಿ ಯುದ್ಧದಲ್ಲಿ ರಾಮ ಸೈನ್ಯವನ್ನು ಸೋಲಿಸಿ ಹನುಮನ ಜೊತೆಗೆ ಮುಖಾಮುಖಿಯಾದಾಗ, ಅಪೂರ್ವ ರಸಮಯ ಘಟ್ಟಕ್ಕೆ ಸಾಕ್ಷಿಯಾಯಿತು. ಹನುಮಂತ ಮತ್ತು ಈಶ್ವರ ಇವರ ನಡುವಿನ ಸಂಭಾಷಣೆ ವೈಚಾರಿಕ ಚರ್ಚೆಗೆ ಗ್ರಾಸವಾಗಿ ಸಂವಾದ ಸಂಭ್ರಮವಾಯಿತು. ದೇವರು, ದೇವತ್ವ, ದೈವೀಸಂಕಲ್ಪ, ದೇವರಿಗೂ ಬರುವ ಧರ್ಮ ಸಂಕಟ, ಕರ್ತವ್ಯ ಪರತೆ, ಭಕ್ತಿಭಾವ ಬಂಧನದ ಬಂಧುರತೆ ಮೊದಲಾದ ವಿಷಯಗಳನ್ನು ಡಾ. ಜಿ.ಎ. ಹೆಗಡೆ ಸೋಂದಾ ಸೊಗಸಾಗಿ ಪ್ರಸ್ತಾಪಿಸಿದರು. ಉತ್ತಮ ಅರ್ಥಧಾರಿ ಆರ.ಟಿ.ಭಟ್ಟರು ಅಷ್ಟೇ ಸಮರ್ಥವಾಗಿ ಹನುಮನ ಸೇವಾ ಕೈಂಕರ‍್ಯ, ರಾಮಭಕ್ತಿ, ರಾಮನ ವಿಶೇಷತೆಗಳ ಕುರಿತಾಗಿ ವ್ಯಾಖ್ಯಾನಿಸಿ ಈಶ್ವರನ ವಾಗ್ಬಾಣಗಳನ್ನು ಎದುರಿಸಿದರು.
ರಸವತ್ತಾಗಿ ನಡೆದ ಈ ಸಂವಹನದ ಕೊನೆಯಲ್ಲಿ ಹರಿ-ಹರರಲ್ಲಿ ಭೇಧವಿಲ್ಲ. ಅದು ಇದ್ದರೆ ಮೌಢ್ಯತುಂಬಿದ ಭಕ್ತರಲ್ಲಿ ಮಾತ್ರ ಎಂಬ ತಿರ್ಮಾನಕ್ಕೆ ಬಂದರು. ಶತೃಘ್ನನಿಂದ ಯೋಗಿನಿದತ್ತ ಶಕ್ತಿಯ ಪ್ರಯೋಗದ ಪರಿಣಾಮ ಮತ್ತು ಹನುಮನ ಮೂಲಕ ಶ್ರೀ ರಾಮನ ದರ್ಶನದ ಪರಿಣಾಮ, ವೀರಮಣಿಗೆ ರಾಮತತ್ವ ಬೋಧೆಯಾಗಿ ಈಶನ ಎದುರು ಹರಿ-ಹರರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ ಹರಿ-ಹರರಲ್ಲಿ ಭೇಧವಿಲ್ಲ, ಹಾಗಾಗಿ ಭೇಧ ಸಲ್ಲ. ಎಂಬ ತಾರ್ಕಿಕ ನಿಲುವಿನೊಂದಿಗೆ ಸಂವಾದ ಸನಾದವಾಯಿತು. ಈ ಹಿನ್ನಲೆಯಲ್ಲಿ, ರಾಮನು ಜ್ಯೋತಿರ್ಮೇಧಕ್ಕೆ ಆಗಮಿಸಿ ದರ್ಶನ ನೀಡಿದಾಗ ಈಶನು ಮನೆ ಅಳಿಯತನದಿಂದ ನಿವೃತ್ತನಾಗಿ ಶುಭಕಾರನಾಗಿ ಕೈಲಾಸದತ್ತ ಸಾಗುವ ರಮ್ಯರಮಣೀಯ ಸನ್ನಿವೇಶವನ್ನು ಡಾ.ಜಿ.ಎ.ಹೆಗಡೆ ಸೋಂದಾ ಮಾತಿನ ಮಂಟಪದಲ್ಲಿ ಕಟ್ಟಿಕೊಟ್ಟರು. ರಾಮನ ಪಾತ್ರದಲ್ಲಿ ರಘುಪತಿ ನಾಯ್ಕ ಕಾಣಿಸಿಕೊಂಡು ಶಿವತತ್ವ ಮತ್ತು ವೈಷ್ಣವ ತತ್ವ ಎರಡರ ಉದ್ದೇಶವು ಒಂದೇ ಆಗಿದೆ ಎನ್ನುತ್ತಾ ಆಖ್ಯಾನಕ್ಕೆ ಮಂಗಳ ಕೋರಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಾರಾಧಕ ರಘುಪತಿ ನಾಯ್ಕ ಹೆಗ್ಗರಣಿ ಅಭಿಮಾನಿ ಸಂಘದ ಉಪಾಧ್ಯಕ್ಷ ಜಿ.ಟಿ.ನಾಯ್ಕ ಗಮ್ಯನಜಡ್ಡಿ ಕಾರ್ಯಕ್ರಮದ ಅವಲೋಕನಕಾರರಾಗಿ ಮಾತಾಡಿ ಯಕ್ಷ ರಸಸಾಗರದಲ್ಲಿ ಮುಳುಗೆದ್ದ ಅನುಭವವನ್ನು ಕಲಾವಿದರು ನೀಡಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಜಿ.ಎ.ಹೆಗಡೆ ಸೋಂದಾ, ಯಕ್ಷಗಾನವನ್ನೇ ಉಸಿರಾಗಿಸಿಕೊಂಡ ಕಲಾವಿದ ರಘುಪತಿ ನಾಯ್ಕ ಅವರ ಮನೆಯಲ್ಲಿ ಅವರ ಜೊತೆ ಒಡನಾಡಿದ ಕಲಾವಿದರಾದ ನಾವೆಲ್ಲರೂ ಸೇರಿ ರಸಮಯವಾಗಿ ಈ ಕಾರ್ಯಕ್ರಮ ನಡೆಸುವ ಅವಕಾಶ ಯೋಗಾಯೋಗವಾಗಿ ಕೂಡಿ ಬಂದಿದ್ದು ಪೂರ್ವ ಜನ್ಮದ ಪುಣ್ಯ ವಿಶೇಷ ಎಂದರು. ಯಕ್ಷಗಾನ ವಿದ್ವಾಂಸರಾಗಿ ತಾವು ಬರೆದ ‘ಯಕ್ಷಗಾನಂ ಗೆಲ್ಗೆ’ ವೈಚಾರಿಕ ಗ್ರಂಥವನ್ನು ರಘುಪತಿಯವರಿಗೆ ನೀಡಿ ಶುಭ ಹಾರೈಸಿದರು.
ಮತ್ತೊಬ್ಬ ಅತಿಥಿ ಜಾನಪದ ಪ್ರಶಸ್ತಿ ವಿಜೇತ ಹಿರಿಯ ಕಲಾಜೀವಿ ವಿದ್ವಾಂಸ ಜಿ.ಎಮ್.ಭಟ್ಟ ವಾಜಗಾರ ಶುಭ ಹಾರೈಸಿ ‘ಪಂಚದ್ರುಮ’ ಕೃತಿಯನ್ನು ತಮ್ಮ ಶಿಷ್ಯ ರಘುಪತಿಗೆ ನೀಡಿ ಶುಭಕೋರಿದರು. ಅಭಿಮಾನಿ ಸಂಘದ ಕಾರ್ಯದರ್ಶಿ ರತ್ನಾಕರ ನಾಯ್ಕ ಹೆಗಡೆಕಟ್ಟಾ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ನೀಡಿ, ಮನೆಮನೆಗಳಲ್ಲಿ ಇಂತಹ ಪುರಾಣೋಕ್ತ ಕಲಾ ಪ್ರದರ್ಶನ ನಡೆದಾಗ ಬದುಕಿಗೊಂದು ಭವ್ಯತೆ ಮೂಡುತ್ತದೆ ಎಂದರು. ವೀರಮಾರುತಿ ಯಕ್ಷಗಾನ ಮಂಡಳಿಯ ಯಜಮಾನನಾಗಿ ತಾಳಮದ್ದಲೆ, ಯಕ್ಷಶಿಕ್ಷಣ, ಮತ್ತು ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಘುಪತಿಯವರಿಗೆ ಅವರ ಯಕ್ಷಸೇವೆಯನ್ನು ಗುರುತಿಸಿ, ಅಭಿಮಾನದಿಂದ ಯಕ್ಷಗಾನದ ಗಧೆಯನ್ನು ಅಭ್ಯಾಗತರ ಕರತಾಡನದ ನಡುವೆ ನೀಡಿ ರತ್ನಾಕರ ನಾಯ್ಕರು ಸನ್ಮಾನಿಸಿದ್ದು ವಿಶೇಷವಾಗಿತ್ತು. ಕೊನೆಯಲ್ಲಿ ರಘುಪತಿಯವರು ಕಲಾವಿದರೆಲ್ಲರಿಗೆ ಕಲಾಗೌರವ ನೀಡಿ ಸನ್ಮಾನಿಸಿ ವಂದನಾರ್ಪಣೆಗೈದರು.