ಕಾರವಾರ: ಭಾರತದ ಸಮಗ್ರ ಅಭಿವೃದ್ಧಿಯ ಜತೆಗೆ ಹಣಕಾಸು ಭದ್ರತೆ, ಮೂಲಭೂತ ಅಭಿವೃದ್ಧಿ ಹಾಗೂ ದೀನರ ಸಬಲೀಕರಣದ ಮೂಲಕ ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಅಮದಳ್ಳಿಯಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಎಸ್‌ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷದ ಸಾಧನೆ ಸಮಾವೇಶ ಹಾಗೂ ಸೇವಾ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಸಿ ಮತ್ತು ಎಸ್ಟಿ ಸಮುದಾಯದವರಿಗೆ ಕೇಂದ್ರ ಸರ್ಕಾರ 75 ಯುನಿಟ್ ಉಚಿತ ವಿದ್ಯುತ್, ಕೃಷಿ ಚಟುವಟಿಕೆಗೆ ಸಹಾಯ, ಕೈಗಾರಿಕೋದ್ಯಮ ಸ್ಥಾಪನೆಗೆ ಸಹಕಾರ, ಎಸ್.ಸಿ., ಎಸ್ಟಿ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೆರವು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿದೆ. ಅಲ್ಲದೇ, ಎಸ್‌ಸಿ, ಎಸ್‌ಟಿ ಸಮುದಾಯದವರು ದೌರ್ಜನ್ಯಕ್ಕೊಳಗಾಗಿ ಮೃತಪಟ್ಟರೆ ಉದ್ಯೋಗವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದ ಜನರ ಹಾಗೂ ದೇಶದ ಕಲ್ಯಾಣಕ್ಕಾಗಿ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದಾರೆ. ಬಡಜನರ ಕಲ್ಯಾಣಕ್ಕಾಗಿ, ರೈತರ ಏಳಿಗೆಗಾಗಿ, ದೀನ ದಲಿತರ ಉದ್ಧಾರಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆತ್ಮ ನಿರ್ಭರ ಭಾರತ ಯೋಜನೆ ಮೂಲಕ ಸ್ವಯಂ ಉದ್ಯಮ ಸ್ಥಾಪನೆ ಮಾಡಲು ಕರೆ ನೀಡಿದ್ದಾರೆ ಎಂದರು. ಕೋವಿಡ್ 19ನ್ನು ಸಮರ್ಥವಾಗಿ ಎದುರಿಸಿ ಜನರಿಗೆ ಉಚಿತ ಲಸಿಕೆಯನ್ನು ನೀಡಿದ್ದಾರೆ. ವಿಶ್ವಕ್ಕೆ ಕೋವಿಡ್ ಲಸಿಕೆ ಪರಿಚಯಿಸಿ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಭಾರತ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದಂತಾಗಿದೆ ಎಂದರು.
ಅಮದಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಐಟಿಐ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಎಸ್‌ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಲ್ಲದೇ, ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಶಾಸಕರು ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಉದಯ ಬಶೆಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ನಾಯ್ಕ, ಉಪಾಧ್ಯಕ್ಷ ರವಿ, ಪ್ರಮುಖರಾದ ಉದಯ ನಾಯ್ಕ, ಸೂರ್ಯಪ್ರಕಾಶ ಬಿ.ಎನ್., ಸುಭಾಷ ನಾಯ್ಕ, ಗ್ರಾಮ ಪಂಚಾಯತಿ ಸದಸ್ಯರು, ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.