ಶಿರಸಿ: ಉರಿಬಾನ ಬೆಳದಿಂಗಳು ಕೃತಿ ಇಂಗ್ಲೀಷಿಗೂ ಭಾಷಾಂತರ ಆಗುತ್ತಿದೆ ಎಂದು ಕೃತಿಕಾರ, ಪತ್ರಕರ್ತೆ ಕೃಷ್ಣಿ ಶಿರೂರು ಹೇಳಿದರು.
ಅವರು ಶನಿವಾರ ನಗರದ ನಯನ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕ, ನಯನ ಫೌಂಡೇಶನ್ ಜಂಟಿಯಾಗಿ ಹಮ್ಮಿಕೊಂಡ ಪತ್ರಕರ್ತೆ ಕೃಷ್ಣಿ ಶಿರೂರು ಬರೆದ ಉರಿಬಾನ ಬೆಳದಿಂಗಳು ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾನ್ಸರ್ ಎದುರಿಸುವ ಶಕ್ತಿ, ಸ್ಥೈರ್ಯ ಗಾಯತ್ರೀ ಮಂತ್ರ ಕೊಟ್ಟಿದೆ. ನನ್ನ ಅನುಭವ ಎಲ್ಲರಿಗೂ ತಿಳಿಸಲು ಭಾಷಾಂತರ ಆಗಬೇಕು ಎಂದು ಕೆಲಸ ಮಾಡಲಾಗುತ್ತಿದೆ. ಆರು ತಿಂಗಳ ಒಳಗೆ ಕೃತಿ ಬರಬಹುದು ಎಂದರು.
ಎಲ್ಲರೂ ನಿತ್ಯ ಗಾಯತ್ರೀ ಮುದ್ರೆಗಳನ್ನು ನಿಯಮಿತವಾಗಿ ಮಾಡಬೇಕು. ರೋಗಿಗಳು ಮಾತ್ರವಲ್ಲ, ಆರೋಗ್ಯವಂತರೂ ನಿತ್ಯ ಮಾಡಬೇಕು ಎಂದರು.ಕ್ಯಾನ್ಸರ್ ನೆಗೆಟಿವ್ ಆಗಿ ನೋಡಬಾರದು. ಪಾಸಿಟಿವ್ ಆಗಿ ನೋಡಬೇಕು ಎಂದರು.
ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಯುವ ಜನರಲ್ಲಿ ಜೀವನ ಗೆಲ್ಲುವದು ಹೇಗೆ ಎಂಬುದನ್ನು ಈ ಉರಿಬಾನ ಬೆಳದಿಂಗಳು ಕಲಿಸುತ್ತದೆ. ಅರ್ಬುದ ರೋಗದ ಜೊತೆ ಹೃದಯ ರೋಗಕ್ಕೆ ಕೂಡ ಮುದ್ರೆ ಉಪಯುಕ್ತ. ಈ ಕೃತಿ ಎಸ್ಸೆಸ್ಸೆಲ್ಸಿ ನಂತರದ ಪಠ್ಯದಲ್ಲಿ ಕೂಡ ಸೇರಿಸಬಹುದು ಎಂದರು.
ಪರಿಸರ ಬರಹಗಾರ ಕೇಶವ ಹೆಗಡೆ ಕೊರ್ಸೆ, ನೇತ್ರತಜ್ಞ ಡಾ. ಶಿವರಾಮ ಕೆ.ವಿ, ಐಎಂಎ ಮಹಿಳಾ ಬಳಗದ ಅಧ್ಯಕ್ಷೆ ಡಾ. ಆಶಾ ಪ್ರಭು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಮಾ ಸ್ವಾದಿ ಇತರರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ಗೋರ್ನಮನೆ, ತನುಶ್ರೀ ಹೆಗಡೆ ನಿರ್ವಹಿಸಿದರು.